ನಿಮ್ಮ ತಲೆ ಕೂದಲೇ ದೊಡ್ಡ ತಲೆನೋವಾಗಿಬಿಟ್ಟಿದೆಯೇ? ಕೂದಲು ಉದುರುತ್ತಿದೆ, ಜಡೆ ತೆಳುವಾಗುತ್ತಿದೆ, ತಲೆ ಬೋಳಾಗುತ್ತಿದೆ ಅನಿಸುತ್ತಿದೆಯೇ? ಇದು ನಿಮ್ಮದು ಮಾತ್ರವಲ್ಲ ಈಗೀಗ ಇದು ಅನೇಕ ಮಹಿಳೆಯರ ಸಮಸ್ಯೆಯಾಗಿಬಿಟ್ಟಿದೆ. ಕೂದಲು ಉಳಿಸಿಕೊಳ್ಳುವುದು ಹೊಸ ಕೂದಲು ಬೆಳೆಸುವುದಕ್ಕಿಂತ ದೊಡ್ಡ ಸಮಸ್ಯೆಯಾಗುತ್ತಿದೆ. ಪ್ರತಿ ಕೂದಲಿನ ಎಳೆ ಕಣ್ಣಿಗೆ ಸರಿಯಾಗಿ ಕಾಣದಷ್ಟು ತೆಳುವಾಗಿ ಮನಸ್ಸಿನ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತದೆ. ಕೂದಲಿಗೆ ವಿಧವಿಧವಾದ ಎಣ್ಣೆಗಳು, ಬಗೆ ಬಗೆಯಾದ ಶಾಂಪೂಗಳು, ಕಂಡ ಕಂಡ ಹೇರ್ ಪ್ಯಾಕ್ ಗಳನ್ನೆಲ್ಲ ಹಾಕಿದ ಮೇಲೂ ಕೂದಲಿನ ಸಮಸ್ಯೆ ಪರಿಹಾರವಾಗದಿದ್ದಾಗ ತಲೆ ಬೋಳಾಗಿಬಿಡುತ್ತದೆಯೇನೋ ಎಂಬ ಆತಂಕದೊಂದಿಗೆ ನೆಮ್ಮದಿ ಹಾಳಾಗುವುದಂತೂ ಸತ್ಯ. ಆದರೆ ಕೂದಲನ್ನು ಉಳಿಸಿ, ಉದುರಿದ ಕಡೆ ಕೂದಲನ್ನ ಬೆಳೆಸಲು ಸಾಧ್ಯವೇ ಅಂತ ಅನೇಕ ಮಂದಿ ಆ ನಿಟ್ಟಿನಲ್ಲಿ ಪರಿಹಾರ ಹುಡುಕುತ್ತಿರುತ್ತಾರೆ. ಆದರೆ ಅಂಥಾ ಪರಿಹಾರ ಅಷ್ಟು ಸುಲಭವಾಗಿ ಸಿಗುವುದಿಲ್ಲ. ( home remedies for hairfall )
ಕೆಲವರು ತಮಾಷೆಯಾಗಿ ಹೇಳುವ ರೀತಿ, ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುವ ಔಷಧಿ ಕಂಡು ಹಿಡಿದ ವ್ಯಕ್ತಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಬಿಡುವುದಂತೂ ಖಂಡಿತ. ಹಿಂದೆಲ್ಲಾ ಬರಿ ಪುರುಷರ ಸಮಸ್ಯೆ ಮಾತ್ರ ಆಗಿದ್ದ ಈ ಕೂದಲು ಹೋಗುವ ಅಥವ ತಲೆ ಬೋಳಾಗುವ ಸಮಸ್ಯೆ ಈಗ ಹೆಚ್ಚಾಗಿ ಮಹಿಳೆಯರನ್ನೂ ಕಾಡುತ್ತಿದೆ. ಆದರೆ ಕೆಲವೊಂದು ಮನೆ ಮದ್ದು ಮತ್ತು ನಿತ್ಯ ಕ್ರಮಗಳಿಂದ ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಇತ್ತೀಚಿಗೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಹುಟ್ಟಿ ಬರುವಂತೆ ನೋಡಿಕೊಳ್ಳಬಹುದು.
ಹಾಗಾದರೆ ಏನೇನು ಮಾಡಬೇಕೆಂದು ಗಮನವಿಟ್ಟು ಓದಿರಿ.
ತೆಂಗಿನೆಣ್ಣೆಯಿಂದ ಕೂದಲು ಬೆಣ್ಣೆ!
ತೆಂಗಿನ ಕಾಯಿ ಎಣ್ಣೆ ಕೂದಲಿಗೆ ಒಳ್ಳೆಯದು ಅಂತ ಕೇಳಿದ್ದೀರ ಆದರೆ ಬರಿ ತೆಂಗಿನಕಾಯಿ ಎಣ್ಣೆ ಹಚ್ಚಿದಾಕ್ಷಣ ಕೂದಲು ಬೆಳೆದು ಬಿಡುವುದಿಲ್ಲ. ನೀವು ಬಾಟಲಿನಿಂದ ಬಾಗಿಸಿ ತಣ್ಣಗಿರುವ ತೆಂಗಿನಕಾಯಿ ಎಣ್ಣೆ ತಲೆಗೆ ಹಚ್ಚಿಕೊಳ್ಳುವುದಕ್ಕಿಂತ ಅದನ್ನು ಒಂದು ತಾಮ್ರದ ಪಾತ್ರೆಯಲ್ಲಿ ಒಂದಷ್ಟು ಬೆಚ್ಚಗಾಗುವಷ್ಟು (warm) ಮಾತ್ರ ಬಿಸಿ ಮಾಡಿ (ಕುದಿಸಬೇಡಿ. ಉಗುರು ಬೆಚ್ಚಗಿದ್ದರೆ ಸಾಕು) ಅದನ್ನು ತಲೆಗೆ ಹಚ್ಚಿಕೊಳ್ಳಿರಿ. ಹಚ್ಚಿದ ನಂತರ ಬರಿ ಬೆರಳುಗಳಿಂದ ಮೆಲ್ಲನೆ ಕೂದಲಿನ ಬುಡವನ್ನು ಒಂದಷ್ಟು ಅಲ್ಲಾಡಿಸುವಂತೆ ಮಸಾಜ್ ಮಾಡಿರಿ. ನಿಮಗೆ ಆಗದಿದ್ದರೆ ಯಾರದ್ದಾದರು ಸಹಾಯ ಪಡೆಯಿರಿ. ಹತ್ತು ಹನ್ನೆರಡು ಗಂಟೆಯಷ್ಟು ಕಾಲ ಹಾಗೇ ಬಿಟ್ಟು ಆನಂತರ ಬಿಸಿ ನೀರಿನ ಸ್ನಾನ ಮಾಡಿ. ನಿಮ್ಮ ಕೂದಲಿಗೆ ಇದು ಬಹಳ ಸಹಕಾರಿಯಾಗುತ್ತೆ. ವಾರಕ್ಕೆ ಎರಡು ಬಾರಿಗಿಂತ ಹೆಚ್ಚು ಮಾಡಬೇಡಿ. ನಿಮ್ಮ ಕೂದಲು ಒಂದಷ್ಟು ಪುಷ್ಟಿ ಪಡೆದ ರೀತಿಯಲ್ಲಿ ಕಾಣಲು ಆರಂಭವಾಗುತ್ತದೆ.
ತೆಂಗಿನ ಕಾಯಿಯ ಎಣ್ಣೆಯನ್ನು ಬಳಸುವುದನ್ನು ಮಾತ್ರ ಕೇಳಿದ್ದೀರ ಆದರೆ ತೆಂಗಿನ ಕಾಯಿಯ ಹಾಲು ಕೂಡ ಕೂದಲನ್ನು ಬಲಿಷ್ಠಗೊಳಿಸುತ್ತದೆ ಅಂತ ಗೊತ್ತಾ? ಹೌದು, ತೆಂಗಿನ ಕಾಯಿ ಹೋಳುಗಳನ್ನು ಮಿಕ್ಸಿಯಲ್ಲಿ ಹಾಕಿ ಸರಿಯಾಗಿ ರುಬ್ಬಿ ಅದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ, ರಸ ಶೋಧಿಸಿ ಆ ಹಾಲನ್ನು ಹಾಗೆ ತಲೆಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ತೊಳೆಯಿರಿ. ತೊಳೆಯುವಾಗ ತಣ್ಣೀರು ಅಥವಾ ಉಗುರುಬೆಚ್ಚ ನೀರನ್ನು ಮಾತ್ರ ಬಳಸಿ. ( home remedies for hairfall )
ಈರುಳ್ಳಿ
ಈರುಳ್ಳಿ ರಸವನ್ನು ತಲೆಗೆ ಹಚ್ಚಿದವರು ತಲೆಗೂದಲಿನ ಬೆಳವಣಿಗೆಯಲ್ಲಿ ಬಹಳಷ್ಟು ವೃದ್ಧಿಯನ್ನು ಕಂಡಿರುವ ಉದಾಹರಣೆಗಳಿವೆ. ವಿಪರೀತ ಕೂದಲು ಉದುರುವಿಕೆ ಮತ್ತು ಬೋಳಾಗುವ ಮಟ್ಟಕ್ಕೆ ಕೂದಲು ಉದುರಿದವರು ಈರುಳ್ಳಿಯನ್ನು ಆಪತ್ಭಾಂಧವನಂತೆ ಕಾಣಬಹುದು. ಈರುಳ್ಳಿ ರಸವನ್ನು ಹಚ್ಚಿ, ಮೆಲ್ಲನೆ ಬೆರಳುಗಳಿಂದ ತಲೆಯನ್ನು ಮಸಾಜ್ ಮಾಡಿ ಕೆಲವು ಗಂಟೆಗಳ ನಂತರ ತಲೆಯನ್ನು ಶಾಂಪೂವಿನದಿಂದ ತೊಳೆದರೆ ಕೂದಲು ಸೊಂಪಾಗಿ ಬೆಳೆಯುವುದು, ಮಾತ್ರವಲ್ಲದೆ ಹೊಸ ಕೂದಲು ಕೂಡ ಹುಟ್ಟಲು ಶುರುವಾಗುತ್ತದೆ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ಸಾಕು. ಈರುಳ್ಳಿಯನ್ನು ಎರಡು ಹೋಳಾಗಿ ಮಾಡಿ ಒಂದೊಂದು ಭಾಗವನ್ನೂ ಮುಳ್ಳು ಚಮಚ ದಿಂದ ಚುಚ್ಚಿ ರಸಾಬರುವಂತೆ ಮಾಡಿ ಆ ರಸವನ್ನು ತಲೆಗೆ ಹಚ್ಚಿ ಆನಂತರ ಮೆಲ್ಲನೆ ಮಸಾಜ್ ಮಾಡುವುದು ಸೂಕ್ತ. ಆದರೆ ಅದಾಗದಿದ್ದರೆ ಈರುಳ್ಳಿಯನ್ನು ಜಜ್ಜಿ ತಲೆಯ ಮೇಲೆಯೇ ಅದನ್ನು ಹಿಂಡಿಕೊಂಡು ರಸ ಬರುವಂತೆ ಮಾಡಿ ಆನಂತರ ಮಸಾಜ್ ಮಾಡುವುದು ಸೂಕ್ತ. ಈರುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ರಸ ತೆಗೆಯುವ ಕೆಲಸ ಮಾಡಿದರೆ ರಸ ಹೆಚ್ಚಾಗಿ ಬರಬಹುದು ಆದರೆ ಅದರಲ್ಲಿ ನೀರಿನ ಅಂಶ ಜಾಸ್ತಿ ಇದ್ದು ಪ್ರಯೋಜನ ಕಡಿಮೆ ಆಗಬಹುದು. ಈರುಳ್ಳಿ ಕತ್ತರಿಸಲ್ಪಟ್ಟ ಮೇಲೆ ಅಥವ ಜಜ್ಜಲ್ಪಟ್ಟ ಮೇಲೆ ತಕ್ಷಣ ಅದರ ರಸವನ್ನು ತಲೆಗೆ ಹಾಕಬೇಕು, ಇಲ್ಲದಿದ್ದರೆ ಅದರ ಕೆಲವು ಸತ್ವಗಳು ಹೋಗಿಬಿಟ್ಟಿರುತ್ತವೆ ಮತ್ತು ಆಮೇಲೆ ಪ್ರಯೋಜನವಿರುವುದಿಲ್ಲ.
ಈರುಳ್ಳಿ ಇನ್ನೂ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕೆಂದರೆ ವಾರಕ್ಕೊಮ್ಮೆ ಒಂದು ನಿಂಬೆ ಹಣ್ಣಿನ ರಸಕ್ಕೆ ಅದರ ಎರಡು ಪ್ರಮಾಣದಷ್ಟು ಮೊಸರನ್ನು ಸೇರಿಸಿ ಕೂದಲಿನ ಬುಡಕ್ಕೆ ಉಜ್ಜಿ ಒಂದು ಗಂಟೆಯ ನಂತರ ಬರಿ ನೀರಿನಲ್ಲಿ ತೊಳೆದು ತಲೆ ಮೇಲೆ ನೀರು ಆರಿದ ಮೇಲೆ ಈರುಳ್ಳಿ ರಸ ಪ್ರಯೋಗ ಮಾಡಿ. ಆದರೆ ಡೆರ್ಮ ರೋಲರ್ ಎಂಬ ಮುಳ್ಳಿನ ರೋಲರ್ ಅನ್ನು ಬಳಸಿ ಕೂದಲು ಹೋಗಿರುವ ಜಾಗಕ್ಕೆ ಉಜ್ಜಿ ಅನಂತರ ಈರುಳ್ಳಿ ರಸ ಬಳಸಿದರೆ ಇನ್ನೂ ಪರಿಣಾಮಕಾರಿಯಾದ ಫಲಿತಾಂಶವನ್ನು ಕಾಣಬಹುದು. ( home remedies for hairfall )
ಲೋಳೆಸರದಿಂದ ನುಣುಪು – (ಅಲೋ ವೆರಾ – Aloe Vera)
ಅಲೋವೆರಾ ದ ಬಗ್ಗೆ ಎಲ್ಲರಿಗೂ ಗೊತ್ತು ಇದನ್ನು ಲೋಳೆಸರವೆಂದು ಕರೆಯುತ್ತಾರೆ. ಆಲೋವೆರಾದ ದಪ್ಪನೆಯ ಎಲೆಗಳನ್ನು ತಂದು ಅದರ ಮೇಲಿಂದ ಚರ್ಮ ತೆಗೆದು ಒಳಗಿನ ಲೋಳೆಯಾಗಿರುವ ತಿರುಳು ಭಾಗವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಅದನ್ನು ಒಂದು ಬೌಲ್ ನಲ್ಲಿ ಹಾಕಿ ಕೈಯಿಂದ ಹಿಚುಕಿ ಅಥವಾ ಕಳ್ಳಿಯ ಕುಟ್ಟಾಣಿಯಿಂದ ಜಜ್ಜಿ ರಸ ಬರುವಂತೆ ಮಾಡಿ ಆ ರಸವನ್ನು ತಲೆಗೆ ಹಚ್ಚುವುದರಿಂದ ತಲೆ ತಂಪಾಗುವುದು ಮಾತ್ರವಲ್ಲದೆ ಬುಡದಲ್ಲಿರುವ ಆಮ್ಲೀಯ ಅಂಶಗಳು ಕಡಿಮೆಯಾಗಿ ಕೂದಲು ದಪ್ಪನಾಗಿ ಬೆಳೆಯಲು ಸಹಾಯಕವಾಗುತ್ತದೆ. ( home remedies for hairfall )
ಮನೆಯಲ್ಲೇ ಕೂದಲೆಣ್ಣೆ ಉತ್ಪಾದನೆ
ಕೂದಲಿಗೆ ಯಾವ ಎಣ್ಣೆ ಸೂಕ್ತ ಎಂದು ಅನೇಕರು ಕೇಳುತ್ತಾರೆ. ಕೂದಲಿಗೆ ಅತ್ಯಂತ ಸೂಕ್ತವಾದ ಎಣ್ಣೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಮೊದಲು ಒಂದು ಹಿಡಿಯಷ್ಟು ಕರಿಬೇವು ಸೊಪ್ಪನ್ನು ಒಣಗಿಸಿರಿ. ಸರಿಯಾಗಿ ಒಣಗಿ ಅವು ಹಸಿರು ಬಣ್ಣವನ್ನು ಕಳೆದುಕೊಂಡಾಗ ಆ ಎಲೆಗಳನ್ನು ತೆಗೆದಿಡಿ. ನಾಲ್ಕೈದು ನೆಲ್ಲಿಕಾಯಿಗಳನ್ನು ಮೂರು ದಿನಗಳ ಕಾಲ ಬಿಸಿಲಿನಲ್ಲಿಟ್ಟು ಅವು ಬಾಡಿದಾಗ ಅವನ್ನು ತೆಗೆದಿಟ್ಟುಕೊಳ್ಳಿ. ಒಂದು ತಾಮ್ರದ ಪಾತ್ರೆಯಲ್ಲಿ ಒಂದು ಕಪ್ ನಷ್ಟು ತೆಂಗಿನೆಣ್ಣೆ ಒಂದು ಕಪ್ನಷ್ಟು ಹರಳೆಣ್ಣೆಯನ್ನು ಹಾಕಿ. ಅದಕ್ಕೆ ಒಣಗಿದ ಕರಿಬೇವು ಸೊಪ್ಪು ಮತ್ತು ಒಣಗಿದ ನೆಲ್ಲಿಕಾಯಿಗಳನ್ನು ಹಾಕಿ. ಆ ಮಿಶ್ರಣಕ್ಕೆ ಒಂದು ಹಿಡಿ ಶುಚಿಯಾದ ಸಾಮಾನ್ಯ ಮೆಂತ್ಯೆ ಹಾಕಿ. ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ಬಿಸಿಯಾಗಿದ್ದು ತಿಳಿಯುತ್ತಿದ್ದಂತೆಯೇ ಒಂದೆರಡು ನಿಮಿಷ ಉರಿ ಹೆಚ್ಚಿಸಿ ಎಣ್ಣೆಯನ್ನು ಕುದಿಸಿ, ಮತ್ತು ಉರಿ ಆರಿಸಿ ಎಣ್ಣೆಯನ್ನು ಆರಲು ಬಿಡಿ. ಎಣ್ಣೆ ಆರಿದ ಮೇಲೆ ಅದನ್ನು ಶೋಧಿಸಿ ಎಣ್ಣೆಯನ್ನು ತೆಗೆದಿಟ್ಟುಕೊಳ್ಳಿ. ಆ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಹಚ್ಚಿ ಮೆಲ್ಲಗೆ ಮಸ್ಸಾಜ್ ಮಾಡಿ ಎರಡು ಗಂಟೆಗಳ ನಂತರ ಬಿಸಿ ನೀರಲ್ಲಿ ಸ್ನಾನ ಮಾಡಿ. ನಿಮ್ಮ ಕೂದಲು ಆಶ್ಚರ್ಯ ಎನ್ನುವಂತೆ ಚೆನ್ನಾಗಿ ಬೆಳೆಯಲು ಆರಂಭಿಸುತ್ತದೆ. ( home remedies for hairfall )
ಕೂದಲು ಕಾಪಾಡುವ ಕ್ರಮಗಳು
ಕೂದಲು ಬೆಳೆಸುವ, ಉಳಿಸುವ ಪ್ರಯತ್ನದಲ್ಲಿ ಕಂಡ ಜಾಹೀರಾತುಗಳನ್ನೆಲ್ಲ ನಂಬಿ ನಿಮಗೆ ಸೂಕ್ತವಲ್ಲದ ಶಾಂಪೂಗಳನ್ನ ಮತ್ತು ತೈಲಗಳನ್ನ ತಲೆಗೆ ಹಚ್ಚಿ ಇನ್ನೂ ಕೂದಲು ಕಳೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ. ನಿಮಗೆ ಅನುಕೂಲವಿದ್ದರೆ ಯಾವುದಾದರೂ ಒಳ್ಳೆಯ ಚರ್ಮ ತಜ್ಞರನ್ನ ಭೇಟಿ ಮಾಡಿ ನಿಮ್ಮ ಕೂದಲಿಗೆ ಸೂಕ್ತವಾಗುವ ಉತ್ತಮ ದರ್ಜೆಯ ಶಾಂಪೂವನ್ನು ಸೂಚಿಸಲು ಕೇಳಿಕೊಳ್ಳಿ. ಅದನ್ನೇ ಬಳಸಿ. ತಲೆಯಲ್ಲಿ ಹೊಟ್ಟು ಆಗದಂತೆ ನೋಡಿಕೊಳ್ಳಿ. ಹೊಟ್ಟು ಕಂಡುಬಂದರೆ ತಕ್ಷಣ ಒಳ್ಳೆಯ ತಜ್ಞರನ್ನು ಭೇಟಿಯಾಗಿ ಹೊಟ್ಟು ಹೋಗುವ ಹಾಗೆ ನೋಡಿಕೊಳ್ಳಿ. ಹೊಟ್ಟು ಜಾಸ್ತಿಯಾದರೆ ತಲೆಯ ಚರ್ಮ ಹಾಳಾಗಿ ಕೂದಲು ಇನ್ನೂ ಹೋಗಿಬಿಡಬಹುದು.
ಕೂದಲನ್ನು ತೊಳೆಯುವಾಗ ಕೂದಲಿನೊಂದಿಗೆ ಯುದ್ಧ ಮಾಡುವಂತೆ ನಡೆದುಕೊಳ್ಳಬೇಡಿ. ಮೆಲ್ಲನೆ ಮಸಾಜ್ ಮಾಡಿದಂತೆ ತೊಳೆಯಿರಿ. ತೊಳೆದ ನಂತರ ಒಣಗಿಸುವಾಗಲೂ ಒಳ್ಳೆಯ ದರ್ಜೆಯ ಟವಲ್ನಿಂದ ಮೆತ್ತಗೆ ಉಜ್ಜಿ ಒಣಗಿಸಿ.
ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಕೂದಲಿನ ಬುಡಕ್ಕೆ ತೊಂದರೆಯಾಗುವುದು ಮಾತ್ರವಲ್ಲದೆ ಇರುವ ಕೂದಲು ಕೂಡ ಹಾಳಾಗಿ ಬಿಡಬಹುದು. ಸಾಧಾರಣ ಬಿಸಿಯಲ್ಲಿ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಿ.
ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ. ಕೂದಲಿಗೆ ಬೇಕಾದ ಪೋಷಕಾಂಶಗಳು ಆಹಾರದಲ್ಲಿರುವಂತೆ ನೋಡಿಕೊಳ್ಳಿ. ಅಂಥಾ ಆಹಾರ ನೀವು ತೆಗೆದುಕೊಳ್ಳುತ್ತಿಲ್ಲವೇನೋ ಎಂಬ ಅನುಮಾನ ನಿಮಗಿದ್ದರೆ ವಿಟಮಿನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ ಅದರಿಂದ ಹಾನಿಯೇನಿರುವುದಿಲ್ಲ. ( home remedies for hairfall )
ಹೀಗೆ ನೀವು ಮನೆಯಲ್ಲಿ ಹಾನಿಯಾಗದ ರೀತಿಯಲ್ಲಿ ಸರಳ ಉಪಾಯಗಳೊಂದಿಗೆ ಕೂದಲನ್ನು ಕಾಪಾಡಿಕೊಳ್ಳಬಹುದು ಮತ್ತು ಬೆಳೆಸಬಹುದು. ಆದರೆ ನಿಮ್ಮ ಕೂದಲು ಉದುರುವಿಕೆಗೆ ಇನ್ನೇನಾದರೂ ಆರೋಗ್ಯ ಸಂಬಂಧಿ ಕಾರಣಗಳಿದ್ದರೆ ನೀವು ಅದನ್ನು ಹಗುರವಾಗಿ ತೆಗೆದುಕೊಳ್ಳದೆ ಸೂಕ್ತ ವೈದ್ಯರನ್ನ ಭೇಟಿಯಾಗಿ ಪರಿಹಾರ ಪಡೆಯಿರಿ. ಹಾಗೇನೂ ಇಲ್ಲದಿದ್ದರೆ ಮೇಲೆ ನೀಡಿರುವ ಪರಿಹಾರದಿಂದ ನಿಮ್ಮ ಕೇಶ ಸೌಂದರ್ಯ ವೃದ್ಧಿಸುವುದಂತೂ ಬಹುತೇಕ ಖಚಿತ.