gahana logo

Gahana Magazine

₹199/ Year

ನಟನೆಯಲ್ಲೊಂದು ಸುಖವಿದೆ

ನಟಿಯರ ಹಿಂದೆ ನೂರೆಂಟು ನೋವಿದೆ!
ನಟಿಸುವ ಹೆಣ್ಣು ಮಕ್ಕಳು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ವಿಚಿತ್ರವಾದ ಸಮಸ್ಯೆಗಳ್ನು ಎದುರಿಸಬೇಕಾಗುತ್ತದೆ. ಅದು ಇತರೆ ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳಿಗಿಂತ ವಿಭಿನ್ನ. ಉದ್ಯೋಗಸ್ಥ ಮಹಿಳೆಯರು ಸಂಸಾರ ಹಾಗೂ ಉದ್ಯೋಗ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡರೆ ಸಾಕು. ಆದರೆ ನಟನಾ ವೃತ್ತಿಯಲ್ಲಿರುವ ಮಹಿಳೆ ಎದುರಿಸುವ ಸಮಸ್ಯೆ, ಮುಜುಗರ, ಅವಮಾನ, ಹತಾಶೆ, ತಲ್ಲಣ ಎಲ್ಲದಕ್ಕೂ ಒಂದು ಚೌಕಟ್ಟಿಲ್ಲ, ಒಂದು ವ್ಯಾಖ್ಯೆಯೂ ಇಲ್ಲ. ಅದು ಬಹುಸ್ತರದ್ದು, ಬಹು ಆಯಾಮ ಉಳ್ಳದ್ದು. ಆದರೂ ನಿರ್ದೇಶಕರು ‘ಆಕ್ಷನ್’ ಅಂದಕೂಡಲೆ ನಟಿ ಎಲ್ಲ ನೋವನ್ನು ಮರೆತು ಪಾತ್ರದಲ್ಲಿ ಲೀನವಾಗುತ್ತಾಳೆ!

****

ಪ್ರಪಂಚದ ಪ್ರತಿಯೊಂದು ವೃತ್ತಿಯಲ್ಲೂ ಅದರದ್ದೇ ಆದ ಸುಖ ದುಃಖಗಳಿರುತ್ತವೆ. ಪ್ರತೀ ವೃತ್ತಿಯೂ ಅದರದ್ದೇ ಆದ ಸವಾಲುಗಳನ್ನು ಒಡ್ಡುತ್ತದೆ. ಪರಿಶ್ರಮ ಮತ್ತು ಶ್ರದ್ಧೆಗಳನ್ನು ನಿರೀಕ್ಷಿಸುತ್ತದೆ. ಅಂತೆಯೇ ಧಾರಾವಾಹಿ ಜಗತ್ತು ಕೂಡಾ. ಇಲ್ಲಿ ಕೂಡಾ ಬಹಳಷ್ಟು ಪಾತ್ರಗಳಿವೆ. ಪ್ರತೀ ಸ್ಥಾನಕ್ಕೂ ಅದರದ್ದೇ ಆದ ಹೋರಾಟಗಳಿವೆ, ಒಳಸುಳಿಗಳಿವೆ, ಒತ್ತಡಗಳಿವೆ, ನೋವು ನಲಿವುಗಳಿವೆ. ಮೇಲೆ ಕಾಣುವ ಹೊಳಪು, ಬೆಳಕು, ಸೌಂದರ್ಯ, ಜನಪ್ರಿಯತೆಗಳ ಹಿಂದೆ ಬೆವರಿದೆ, ಕಣ್ಣೀರಿದೆ, ಅವಮಾನಗಳಿವೆ, ಛಲವಿದೆ, ಹಠವಿದೆ. ಅದರಲ್ಲೂ ಇಂಥದೊAದು ರಂಗವನ್ನು ವೃತ್ತಿಯಾಗಿ ಆಯ್ದುಕೊಂಡ ಹೆಣ್ಣು ಮಕ್ಕಳಿಗೆ ಅವರದ್ದೇ ಆದ ವಿಚಿತ್ರ ಸಮಸ್ಯೆಗಳಿರುತ್ತವೆ. ಇಲ್ಲಿ ತಮ್ಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳ ಬಯಸುವ ಹೆಣ್ಣು ಮಕ್ಕಳಿಗೆ ಈ ಉದ್ಯಮ ಮತ್ತು ಕುಟುಂಬ ಎರಡರ ಬೆಂಬಲವೂ ಅಗತ್ಯ. ಆದರೆ ದುರದೃಷ್ಟವಶಾತ್ ಬಹಳಷ್ಟು ಸನ್ನಿವೇಶಗಳಲ್ಲಿ ಇವೆರಡೂ ಹೆಣ್ಣು ಮಕ್ಕಳಿಗೆ ಪ್ರತಿಕೂಲವಾಗಿ ಸಂವೇದನಾರಹಿತವಾಗಿ ವರ್ತಿಸಿರುವುದನ್ನು ಕಾಣಬಹುದು. ಉದ್ಯಮ ಹಾಗೆ ವರ್ತಿಸುವುದಕ್ಕೆ ಕಾರಣ ಇಡೀ ವ್ಯವಸ್ಥೆ ಒಂದು ಪೆಕ್ ಆರ್ಡರಿನಲ್ಲಿ ಕೆಲಸ ಮಾಡುತ್ತದೆ. ನನ್ನ ತಲೆಯ ಮೇಲೆ ಕುಕ್ಕುವವರು ಇರುವುದರಿಂದ ನಾನು ಇನ್ನೊಬ್ಬರ ತಲೆಯ ಮೇಲೆ ಕುಕ್ಕಲೇಬೇಕು. ಕುಟುಂಬ ಸರಿಯಾದ ಬೆಂಬಲ ಕೊಡದಿರಲು ಕಾರಣ ಈ ಉದ್ಯಮದ ಬಗ್ಗೆ ಸರಿಯಾದ ತಿಳಿವಳಿಕೆ ಇರದಿರುವುದು. ಮತ್ತು ಅದಕ್ಕಿಂತ ಹೆಚ್ಚಿನದಾಗಿ ಸುಮ್ಮನೆ ಹರಡುವ ಗಾಸಿಪ್‌ಗಳಿಂದ ಈ ಉದ್ಯಮದ ಬಗ್ಗೆ ನಕಾರಾತ್ಮಕÀ ಚಿತ್ರಣ ಸೃಷ್ಟಿಯಾಗಿರುವುದು.

ನಟನಾವೃತ್ತಿಯಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ಪ್ರಾಕ್ಟಿಕಲ್ ಸಮಸ್ಯೆಗಳ ಸ್ಥೂಲ ಚಿತ್ರಣವನ್ನು ಕೆಲವು ಉದಾಹರಣೆಗಳ ಮೂಲಕ ನೀಡುತ್ತೇನೆ. ಇವುಗಳಲ್ಲಿ ಕೆಲವು ನಾನು ಖುದ್ದಾಗಿ ಅನುಭವಿಸಿರುವುದು ಮತ್ತು ಕೆಲವು ನಾನು ಪ್ರತ್ಯಕ್ಷ ಕಂಡ ಘಟನೆಗಳು.
ಸಮಯದ ಅನಿರ್ದಿಷ್ಟತೆ ಮತ್ತು ಸಂವೇದನಾ ರಹಿತ ಪ್ಲಾö್ಯನಿಂಗ್ :
ನನ್ನ ಧಾರಾವಾಹಿ ಜೀವನದ ಪ್ರಾರಂಭದ ದಿನಗಳು ಅವು. ಹಿಂದಿನ ದಿನ ಪ್ರೊಡಕ್ಷನ್ ಮ್ಯಾನೇಜರ್ ಫೋನ್ ಮಾಡಿ ರಾತ್ರಿ ಹತ್ತು ಗಂಟೆಗೆ ಗಾಡಿ ಕಳಿಸುತ್ತೇವೆ ಮೇಲುಕೋಟೆಗೆ ಹೋಗಬೇಕು ಅಲ್ಲಿ ಚಿತ್ರೀಕರಣ ಎಂದರು. ನನ್ನ ಮಗಳು ಬಹಳ ಚಿಕ್ಕವಳಿದ್ದ ಕಾರಣ ರಾತ್ರಿಯೆಲ್ಲಾ ಅವಳನ್ನು ಬಿಟ್ಟಿರುವುದು ಸಾಧ್ಯವಿಲ್ಲ. ಬೆಳಿಗ್ಗೆ ಐದು ಗಂಟೆಗೇ ಹೊರಡುತ್ತೇನೆ ಬೇಕಾದರೆ ಎಂದೆ. ಅವರು ಐದು ಗಂಟೆಗೆ ಹೊರಟರೆ ಬಹಳ ತಡವಾಗುತ್ತದೆ ಮೂರು ಗಂಟೆಗೆ ಹೊರಡಿ ಎಂದು ಹೇಳಿದರು. ನಾನು ಒಪ್ಪಿಕೊಂಡೆ. ಮಧ್ಯ ರಾತ್ರಿ ಎರಡು ಗಂಟೆಗೆ ಎದ್ದು ತಯಾರಾಗಿ ಮೂರು ಗಂಟೆಗೆ ಗಾಡಿ ಹತ್ತಿ ಐದು ಗಂಟೆಗೆಲ್ಲಾ ಚಿತ್ರೀಕರಣದ ತಂಡ ಉಳಿದುಕೊಂಡಿದ್ದ ಮಂಡ್ಯದ ಹೋಟೆಲಿನ ಮುಂದೆ ನಿಂತಿದ್ದೆವು. ಇನ್ನೂ ಮಬ್ಬುಗತ್ತಲೆ. ಚಿತ್ರೀಕರಣವಿರಲಿ ಯಾರೂ ಇನ್ನೂ ಎದ್ದೂ ಇರಲಿಲ್ಲ. ಸುಮಾರು ಎಂಟು ಗಂಟೆಯ ಹೊತ್ತಿಗೆ ಇಡೀ ತಂಡ ಒಬ್ಬೊಬ್ಬರಾಗಿ ತಿಂಡಿಗೆ ಕೆಳಗಿಳಿದು ಬಂತು. ಎಲ್ಲರೂ ತಿಂಡಿ ತಿಂದು ಮೇಲುಕೋಟೆಗೆ ಹೊರಟಾಗ ಒಂಬತ್ತು ಗಂಟೆ. ಅಲ್ಲಿ ಹೋಗಿ ಚಿತ್ರೀಕರಣ ಶುರುವಾದಾಗ ಹತ್ತು ಗಂಟೆ! ನಾನು ಮೇಕಪ್ ಮಾಡಿಸಿಕೊಳ್ಳಲೇ ಎಂದು ನಿರ್ದೇಶಕರನ್ನು ಕೇಳಿದಾಗ ‘ಇನ್ನೂ ಬೇಡ. ನಿಮ್ಮ ಸೀನ್ ಇನ್ನು ತಡವಾಗಿ ಬರುತ್ತದೆ’ ಎಂಬ ಉತ್ತರ ಬಂತು. ಸರಿ ನಾನು ಅಲ್ಲಿ ಕೂತು, ಇಲ್ಲಿ ಕೂತು, ಪುಸ್ತಕ ಓದಿ, ಫೋನು ನೋಡಿ ಎಷ್ಟೆಲ್ಲಾ ಹೊತ್ತು ಕಳೆದರೂ ಯಾರೂ ನನ್ನನ್ನು ಮಾತಾಡಿಸುತ್ತಲೂ ಇಲ್ಲ, ಕರೆಯುತ್ತಲೂ ಇಲ್ಲ. ನಾನೊಬ್ಬಳು ವ್ಯಕ್ತಿ ಅಲ್ಲಿದ್ದೇನೆಂದೇ ತಿಳಿಯದಂತೆ ಓಡಾಡಿಕೊಂಡಿದ್ದಾರೆ! ಮಧ್ಯಾಹ್ನ ಊಟದ ಬ್ರೇಕ್ ಆಯಿತು. ಊಟ ಮಾಡಿದೆ. ನಂತರ ಸಹಾಯಕ ನಿರ್ದೇಶಕರನ್ನು ಕೇಳಿದೆ ನಾನು ತಯಾರಾಗಲೇ ಎಂದು. ಅವರು ‘ ಇನ್ನೂ ನಿಮ್ಮದು ತಡ ಮೇಡಂ.’ ಎಂದರು. ನನ್ನ ಸಹನೆ ಅಲ್ಲಿಗೆ ಮುಗಿದಿತ್ತು. ‘ದಯವಿಟ್ಟು ಹೇಳಿ. ನನ್ನ ಸೀನ್ ಯಾವಾಗಿದೆ? ಬೆಳಿಗ್ಗೆಯಿಂದ ಕಾಯುತ್ತಿದ್ದೇನೆ’ ಎಂದೆ. ಅವರ ಉತ್ತರ ಆಘಾತಕಾರಿಯಾಗಿತ್ತು. ನನ್ನ ಸೀನ್ ಇದ್ದದ್ದು ರಾತ್ರಿಗೆ! ಕತ್ತಲಾದ ಮೇಲೆ ನನ್ನ ಸೀನ್ ಇದ್ದಿದ್ದು! ಅಂದರೆ ಕನಿಷ್ಟ ಸಂಜೆ ಏಳು ಗಂಟೆಗೂ ಮೊದಲು ನನ್ನ ಸೀನ್ ಶುರುವಾಗುವ ಸಾಧ್ಯತೆಯೂ ಇಲ್ಲ! ಈ ವಿಷಯ ನಿರ್ದೇಶಕರಿಗೆ, ಪ್ರೊಡಕ್ಷನ್ ಮ್ಯಾನೇಜರ್‌ಗೆ ಮುಂಚೆಯೇ ಗೊತ್ತಿತ್ತು. ನನಗೆ ಮನೆಯಲ್ಲಿ ಚಿಕ್ಕ ಮಗಳಿದ್ದಾಳೆ ಎನ್ನುವುದೂ ಗೊತ್ತಿತ್ತು. ಆದಾಗ್ಯೂ ರಾತ್ರಿ ಮೂರು ಗಂಟೆಗೆ ಹೊರಡಿಸಿ ಐದಕ್ಕೆ ಅವರ ಹೋಟೆಲ್ ಎದುರು ಕಾಯುವಂತೆ ಮಾಡಿದ್ದರು.

ಅನಗತ್ಯವಾಗಿ ರಹಸ್ಯ ಮಾಡುವುದು ಈ ರಂಗದಲ್ಲಿ ನಟಿಯರಿಗೆದುರಾಗುವ ದೊಡ್ಡ ಸಮಸ್ಯೆ. ಈ ದಿನದ ಕೆಲಸ ಎಷ್ಟು ಹೊತ್ತಿಗೆ ಮುಗಿಯಬಹುದು ಎಂದು ಹೇಳುವುದಿಲ್ಲ. ಹೇಳಿದ ಸಮಯಕ್ಕೆ ಮುಗಿಸಲಾಗದಿದ್ದರೆ ನಟಿಯರು ಗಲಾಟೆ ಮಾಡುತ್ತಾರೆ ಆದ್ದರಿಂದ ಸಮಯವನ್ನೇ ಹೇಳದಿರುವುದು ಅಥವಾ ಗರಿಷ್ಟ ಕಾಲಾವಧಿಯನ್ನು ಹೇಳುವುದು. ಎರಡೂ ಸಮಸ್ಯೆಯೇ. ಎಂಟು ಗಂಟೆಗೆ ಚಿತ್ರೀಕರಣ ಮುಗಿಯುತ್ತದೆ ಎಂದಿರುತ್ತಾರೆ. ಅದಕ್ಕೆ ತಕ್ಕಂತೆ ಮಕ್ಕಳನ್ನು ಎಲ್ಲಿ ಬಿಡಬೇಕೆಂಬ ವ್ಯವಸ್ಥೆ, ನಾಳಿನ ತರಕಾರಿ, ಹಾಲಿನ ವ್ಯವಸ್ಥೆ, ಮನೆಗೆ ವಾಪಾಸು ಹೋಗುವಾಗ ಕೊಂಡು ಹೋಗಬೇಕಾಗಿದ್ದ ಸಾಮಾನುಗಳ ವ್ಯವಸ್ಥೆ ಎಲ್ಲವನ್ನೂ ಆ ಸಮಯಕ್ಕೆ ತಕ್ಕಂತೆ ಪ್ಲಾö್ಯನ್ ಮಾಡಿಕೊಂಡಿರುತ್ತಾರೆ. ಆ ದಿನ ಮೂರು ಗಂಟೆಗೇ ನಿಮ್ಮದು ಮುಗಿಯಿತು ಮನೆಗೆ ಹೋಗಬಹುದು ಎಂದುಬಿಡುತ್ತಾರೆ! ಸಂಜೆ ಆರಕ್ಕೆ ಮುಗಿಯುತ್ತದೆ ಎಂದುಕೊAಡು ವ್ಯವಸ್ಥೆಗಳನ್ನು ಮಾಡಿಕೊಂಡಿರಿ, ಆ ದಿನ ರಾತ್ರಿ ಒಂಬತ್ತೂವರೆಯಾದರೂ ಕೆಲಸ ನಡೆಯುತ್ತಲೇ ಇರುತ್ತದೆ. ಕೆಲಸದ ಸಮಯ ಅನಿರ್ದಿಷ್ಟವಾಗುವ ಸಮಸ್ಯೆ ಎಷ್ಟೋ ನೌಕರಿಗಳಲ್ಲಿ ಇರುತ್ತದೆ. ಆದರೆ ಹೀಗೆ ನಮ್ಮ ಕೆಲಸದ ಪ್ರಕಾರ ನಮ್ಮ ಸಮಯವನ್ನು ಪ್ಲಾö್ಯನ್ ಮಾಡಿಕೊಳ್ಳಲೇ ಆಗದಂತೆ ಇರುವುದಿಲ್ಲ. ಧಾರಾವಾಹಿಗಳಲ್ಲೂ ಬೆರಳೆಣಿಕೆಯ ಕೆಲವು ನಿರ್ಮಾಣ ಸಂಸ್ಥೆಗಳು ಶಿಸ್ತುಬದ್ಧವಾಗಿರುತ್ತವೆ.
ಕುಟುಂಬದ ಬೆಂಬಲ ಮತ್ತು ಸಹಕಾರ :
ಧಾರಾವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳು ಅಂದರೆ ಒಂದು ದಿನ ಬಂದು ಹೋಗುವ ಪಾತ್ರಗಳಿರುತ್ತವೆ. ಉದಾಹರಣೆಗೆ ಡಾಕ್ಟರ್, ಟೀಚರ್ ಇಂಥ ಪಾತ್ರಗಳು ಒಂದೆರೆಡು ದೃಶ್ಯಗಳಲ್ಲಷ್ಟೇ ಬಂದು ಹೋಗುತ್ತಾರೆ. ಅಂಥ ಪಾತ್ರಗಳನ್ನು ಮಾಡಲು ಒಬ್ಬ ಪ್ರತಿಷ್ಠಿತ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಉಪಾಧ್ಯಾಯಿನಿಯೊಬ್ಬರು ಬರುತ್ತಿದ್ದರು. ಓದಿ ಬರೆದು ಒಂದು ಗೌರವಾನ್ವಿತ ಹುದ್ದೆಯಲ್ಲಿರುವ ಅವರಿಗೆ ನಟನೆಯ ಬಗ್ಗೆ ಅಪಾರ ಹಂಬಲ. ಆದರೆ ಮನೆಯಲ್ಲಿ ಅದಕ್ಕೆ ಪ್ರೋತ್ಸಾಹವಿರಲಿಲ್ಲ. ಗಂಡನನ್ನು ಹೇಗೋ ಮಾಡಿ ಒಪ್ಪಿಸಿ ಇಂಥ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಕಷ್ಟದಲ್ಲೇ ಅದಕ್ಕೆ ಒಪ್ಪಿದ್ದ ಗಂಡ ಹಾಗೆ ಒಪ್ಪಲು ಹಾಕಿದ್ದ ಕಂಡಿಷನ್‌ಗಳಲ್ಲಿ ಒಂದು ಸಮಯದ್ದು. ಅವರು ಮಾಮೂಲಿ ಸ್ಕೂಲಿಗೆ ಹೋಗುವಾಗ ಯಾವ ಸಮಯಕ್ಕೆ ಹೊರಡುತ್ತಾರೆ ಅದೇ ಸಮಯಕ್ಕೆ ಹೊರಡಬೇಕು. ಸಂಜೆ ಮಾಮೂಲಿಯಾಗಿ ಯಾವ ಸಮಯಕ್ಕೆ ಬರುತ್ತಾರೋ ಅದೇ ಸಮಯಕ್ಕೆ ಮನೆಗೆ ಬರಬೇಕು. ಒಂದು ಧಾರಾವಾಹಿ; ಆಸ್ಪತ್ರೆ ದೃಶ್ಯ. ಚಿತ್ರೀಕರಣ ಸಾಗುತ್ತಿದೆ. ಸಂಜೆ ಐದು ಹೊಡೆದಿದೆ. ಅವರ ನಾಲ್ಕನೇ ತರಗತಿ ಓದುತ್ತಿರುವ ಮಗ ಶಾಲೆಯಿಂದ ಬರುವ ಸಮಯ ಅದು. ಈಕೆ ಕೆಲಸ ಮಾಡುತ್ತಿದ್ದ ಶಾಲೆಯಲ್ಲೇ ಮಗನೂ ಓದುತ್ತಿದ್ದುದರಿಂದ ಅಮ್ಮ ಮಗ ಒಟ್ಟಿಗೇ ಶಾಲೆಗೆ ಹೋಗಿ ಬಂದು ಮಾಡುತ್ತಿದ್ದರು. ಆದರೆ ಇಂದು ತಡವಾಗುತ್ತಿದೆ. ಮಗು ಮನೆಗೆ ಬಂದರೆ ಬಾಗಿಲು ತೆರೆಯಲು ಯಾರೂ ಇಲ್ಲ. ತಿನ್ನಲು ಕುಡಿಯಲು ಮಗುವಿಗೆ ಕೊಡುವವರೂ ಇಲ್ಲ್ಲ. ಮನೆಗೆ ಫೋನ್ ಮಾಡಿದರೆ ಸಹಜವಾಗಿಯೇ ಯಾರೂ ಎತ್ತುತ್ತಿಲ್ಲ. ಗಂಡನಿಗೆ ಕರೆ ಮಾಡಿದರೆ ‘ ಈ ಕಾರಣಕ್ಕಾಗಿಯೇ ನಾನು ಬೇಡ ಎನ್ನುವುದು. ಈಗ ಮಗು ಎಲ್ಲಿದೆಯೋ ಏನು ಮಾಡ್ತಿದೆಯೋ ಗೊತ್ತಿಲ್ಲ. ನೀನೇ ಅನುಭವಿಸು. ಮಗನಿಗೆ ಏನಾದರೂ ಆದರೆ ಮಾತ್ರ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಹೆದರಿಸಿದರು ಬಿಟ್ಟರೆ ಮಿಕ್ಕಂತೆ ಏನೂ ಸಹಾಯವಾಗಲಿಲ್ಲ. ಹೆದರಿ ಬಳಲಿದ ಆಕೆಯ ಒದ್ದಾಟ ವಿವರಿಸಲಸದಳ. ಚಿತ್ರೀಕರಣ ಏಳು ಗಂಟೆಯಾದರೂ ಮುಗಿಯುತ್ತಿಲ್ಲ. ಮಗನ ಸುದ್ದಿ ಗೊತ್ತಿಲ್ಲ. ಗಂಡ ಕರೆ ಸ್ವೀಕರಿಸುತ್ತಿಲ್ಲ, ಆ ಒತ್ತಡ ತಡೆಯಲಾರದೇ ಆಕೆ ಅಳತೊಡಗಿದರು. ನಾನು ನನ್ನ ಫೋನಿನಿಂದ ನಿಮ್ಮ ಪತಿಗೆ ಕರೆ ಮಾಡಿ. ಬಹುಶಃ ಫೋನೆತ್ತಬಹುದು ಎಂದೆ. ಅವರು ಹಾಗೇ ಮಾಡಿದರು. ಆ ಕರೆಯನ್ನು ಸ್ವೀಕರಿಸಿದ್ದೇ ಅವರ ಮಗ! ಇವರ ಕೆಲಸ ಮುಗಿಯುತ್ತಿಲ್ಲ ಎಂದು ಇವರು ತಮ್ಮ ಪತಿಗೆ ಮೊದಲು ಫೋನ್ ಮಾಡಿದಾಗಲೇ ಪತಿ ಮನೆಗೆ ಹೋಗಿ ಮಗುವನ್ನು ಆಫೀಸಿಗೆ ಕರೆದುಕೊಂಡು ಬಂದಿದ್ದರು. ಮಗುವಿಗೆ ತಿಂಡಿ ಹಾಲು ಕೊಡಿಸಿ ತನ್ನ ಜೊತೆಯಲ್ಲೇ ಇಟ್ಟುಕೊಂಡಿದ್ದರು. ಆದರೆ ತಡ ಮಾಡಿದ ಹೆಂಡತಿಗೆ ಶಿಕ್ಷೆಯಾಗಲಿ ಅಂತ ಆ ವಿಷಯವನ್ನು ಅವರು ಹೇಳಿರಲಿಲ್ಲ. ಮೂರು ಗಂಟೆಗಳ ಕಾಲ ಆಕೆ ಅನುಭವಿಸಿದ ಸಂಕಟ, ನೋವು, ಒತ್ತಡ, ಆತಂಕಗಳು ವಿವರಣೆಗೆ ನಿಲುಕುವುದಿಲ್ಲ.

ಇನ್ನೊಂದು ಉದಾಹರಣೆ. ಆಕೆ ಒಳ್ಳೆಯ ಕಲಾವಿದೆ. ನಟಿಸಲು ಪತಿಯ ಸಹಕಾರವೂ ಇದೆ. ಆದರೆ ಒಂದೇ ಷರತ್ತು- ಗಂಡ ಇರುವ ಪಾತ್ರ ಒಪ್ಪಿಕೊಳ್ಳುವ ಹಾಗಿಲ್ಲ! ನಾಯಕಿಯಾದರೂ ಖಳನಾಯಕಿಯಾದರೂ ಗಂಡನ ಪಾತ್ರ ಇದ್ದೇ ಇರುತ್ತದೆಯಲ್ಲವೆ? ಈ ಕಂಡೀಷನ್‌ನಿAದಾಗಿ ಆಕೆಗೆ ಪ್ರತಿಭೆಗೆ ತಕ್ಕ ಅವಕಾಶ ದೊರೆಯದೇ ಹೋಯಿತು.
ಕುಟುಂಬದ ಬೆಂಬಲ ದುಡಿಯುವ ಹೆಣ್ಣು ಮಕ್ಕಳಿಗೆ ಅತ್ಯಗತ್ಯ. ನನ್ನ ಮಕ್ಕಳು ನನ್ನ ಕೆಲಸದ ರೀತಿ ನೀತಿಗಳನ್ನು ಅರ್ಥ ಮಾಡಿಕೊಂಡು ಬೆಂಬಲಿಸುವ ಅತ್ತೆಯ ಕೈಯಲ್ಲೋ, ಅಮ್ಮನ ಕೈಯಲ್ಲೋ ಸುರಕ್ಷಿತವಾಗಿವೆ ಎಂದಾಗ ಅಥವಾ ಕಷ್ಟ ಎಂದಾಗ ‘ನಾನಿದ್ದೇನೆ. ನಾನು ಇಷ್ಟು ಮಾಡುತ್ತೇನೆ, ನೀನು ಇಷ್ಟು ಮಾಡು’ ಎಂದು ಗಂಡ ಹಂಚಿಕೊAಡಾಗ ಕ್ಯಾಮೆರಾ ಮುಂದೆ ನಟಿಸುವುದಕ್ಕೂ, ಅವು ಯಾವುದೋ ಬೇಬಿ ಸಿಟ್ಟಿಂಗ್‌ನಲ್ಲಿ ಕುಳಿತು ನನಗಾಗಿ ಕಾಯುತ್ತಿವೆ ಎಂದಿದ್ದಾಗ ಮಾಡುವ ನಟನೆಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ.
ಜನಪ್ರಿಯತೆಯ ದುಷ್ಪರಿಣಾಮಗಳು :
ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸುವ ಹುಡುಗಿಯೊಬ್ಬಳಿಗೆ ಕ್ಯಾಮೆರಾ ಮ್ಯಾನ್ ಒಬ್ಬರ ಸಂಬAಧ ಬಂದಿತು. ಇಬ್ಬರೂ ಒಂದೇ ರಂಗದವರಾದ್ದರಿAದ ಈಕೆಯ ಕೆಲಸದ ಒತ್ತಡಗಳು, ಸಮಯದ ಅನಿರ್ದಿಷ್ಟತೆ ತಿಳಿದಿರುತ್ತದೆ ಎಂಬ ಕಾರಣದಿಂದ ಮದುವೆ ಕೂಡ ಕಷ್ಟವಾಗಲಿಲ್ಲ. ರಸ್ತೆಯಲ್ಲಿ ಓಡಾಡುವಾಗೆಲ್ಲ ಸಿಕ್ಕ ಜನಗಳು ಹುಡುಗಿಯನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಫೋಟೋ ತೆಗೆಸಿಕೊಳ್ಳುತ್ತಿದ್ದರು. ಗಂಡನಿಗೆ ನಿಧಾನವಾಗಿ ಇವೆಲ್ಲಾ ಕಿರಿಕಿರಿಯೆನಿಸತೊಡಗಿತು. “ನಾವು ಇಡೀ ದಿನ ಕ್ಯಾಮೆರ ಹಿಡಿದುಕೊಂಡು ನಿಲ್ಲುತ್ತೇವೆ. ಜನ ನೀವು ನಟ ನಟಿಯರಿಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ನಮ್ಮ ಕಷ್ಟ ಯಾರಿಗೂ ಗೊತ್ತಾಗುವುದೇ ಇಲ”್ಲ ಎಂದು ಸಿಡಿಮಿಡಿಗೊಳ್ಳತೊಡಗಿದ. ಕೊನೆ ಕೊನೆಗೆ ಈ ಸಿಡಿಮಿಡಿ ಅತಿರೇಕಕ್ಕೆ ಹೋಯಿತು. ಜನ ಹತ್ತಿರ ಬಂದು ಮಾತಾಡಿಸಿದರೆ ಮನೆಗೆ ಹೋದ ಮೇಲೆ ಅವಳ ಮೇಲೆ ಗಂಡ ಒಂದಿಲ್ಲೊAದು ಕಾರಣ ತೆಗೆದು ಕೈ ಮಾಡತೊಡಗಿದ. ಈಗ ಇಬ್ಬರೂ ಬೇರೆಯಾಗಿದ್ದಾರೆ. ಮಗು ತಾಯಿಯ ಆರೈಕೆಯಲ್ಲಿ ಬೆಳೆಯುತ್ತಿದೆ. ಮತ್ತೊಂದು ಮಾತು – ಈ ರಗಳೆಗಳಿಂದ ಮನಸ್ಸಿಗೆ ಆದ ನೋವು, ಮಗುವಿನ ಬಾಣಂತನ, ಆರೈಕೆಗಳನ್ನು ಮುಗಿಸಿಕೊಂಡು ಮತ್ತೆೆ ನಟನೆಗೆ ಮರಳುವಷ್ಟರಲ್ಲಿ ನಾಯಕಿ ಪಾತ್ರಗಳ ವಯಸ್ಸು ಮೀರಿ ಪೋಷಕ ಪಾತ್ರಗಳನ್ನು ಮಾಡತೊಡಗಿದಳು.
ಇದು ಬಹುತೇಕ ನಟಿಯರು ವೈಯಕ್ತಿಕ ಬದುಕಿನಲ್ಲಿ ಎದುರಿಸುವ ವಿಶಿಷ್ಟ ಸಮಸ್ಯೆ. ಜನಪ್ರಿಯತೆಯೇ ಜೀವನಕ್ಕೆ ಮುಳುವಾಗುವುದು. ಹೆಚ್ಚಿನ ಗಂಡಸರಿಗೆ ಅದು ಅವರ ಅಹಂಕಾರಕ್ಕೆ ಬೀಳುವ ಪೆಟ್ಟು ಎಂದೇ ಅನಿಸುವುದು ದುರದೃಷ್ಟಕರ. ಇನ್ನು ಕೆಲವು ಹೆಣ್ಣುಮಕ್ಕಳಿಗೆ ನಟಿಸುತ್ತಾಳೆ ಎಂಬ ಒಂದೇ ಕಾರಣಕ್ಕೆ ವರ ಸಿಗುವುದೂ ಕಷ್ಟವಾದದ್ದುಂಟು..
ಕೆಲಸದ ಅಗತ್ಯ ಮತ್ತು ಅನಿವಾರ್ಯತೆಯ ದುರುಪಯೋಗ :
ಒಬ್ಬ ಹಿರಿಯ ನಟಿ. ಆಕೆ ಈ ಮುಂಚೆ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದವರು. ಈಗ ವಯಸ್ಸಾಗಿದೆ. ಧಾರಾವಾಹಿಯೊಂದರಲ್ಲಿ ಅಜ್ಜಿಯ ಪಾತ್ರ ಮಾಡುತ್ತಿದ್ದರು. ಅವರ ಆರ್ಥಿಕ ಬದುಕಿಗೆ ಹಾಗೊಂದು ಕೆಲಸದ ಅಗತ್ಯ ಬಹಳವಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ಅವರು ಈ ಧಾರಾವಾಹಿಯನ್ನು ಬಿಡುವ ಸ್ಥಿತಿಯಲ್ಲಿರಲಿಲ್ಲ. ಅದು ಪ್ರೊಡಕ್ಷನ್ ಸಂಸ್ಥೆಗೆ ಗೊತ್ತಿತ್ತು. ಚಿತ್ರೀಕರಣ ಇರುವ ದಿನ ಬೆಳಿಗ್ಗೆ ಅವರಿಗೆ ಫೋನ್ ಮಾಡಿ ಚಿತ್ರೀಕರಣಕ್ಕೆ ಬರಲು ಹೇಳುವುದು, ಸಂಜೆ ನಾಲ್ಕು ಗಂಟೆಗೆ ದೃಶ್ಯವಿದ್ದರೆ ಬೆಳಿಗ್ಗೆ ಏಳೂವರೆಗೆ ಸಿದ್ಧವಾಗಿರುವಂತೆ ಮಾಡುವುದು. ದಿನದಲ್ಲಿ ಅವರ ಎಷ್ಟು ದೃಶ್ಯಗಳಿವೆ? ಎಷ್ಟು ಹೊತ್ತಿಗೆ ಮುಗಿಯಬಹುದು ಎಂಬ ಅಂದಾಜನ್ನೂ ಕೊಡದಿರುವುದು, ಅವರು ಯಾವುದಾದರೂ ಡೈಲಾಗ್‌ಗೆ ಎರಡು ಮೂರು ಟೇಕ್‌ಗಳನ್ನು ತೆಗೆದುಕೊಂಡರೆ ಸಿಡಿಮಿಡಿಗೊಳ್ಳುವುದು ಹೀಗೆ ಹೇಳಿಕೊಳ್ಳಲಾಗದ ಚಿಕ್ಕ ಚಿಕ್ಕ ಅವಮಾನಗಳು. ಅದನ್ನು ಆಕೆ ಆಡಲಾರಳು ಅನುಭವಿಸಲಾರಳು. ಕೊನೆಗೂ ಆ ಹಿರಿಯ ಕಲಾವಿದೆ ಧಾರಾವಾಹಿಯನ್ನು ಅರ್ಧಕ್ಕೇ ಬಿಡಬೇಕಾಯಿತು.
ಧಾರಾವಾಹಿಯ ಚಿತ್ರೀಕರಣದ ದಿನಗಳೇ ನಟ ನಟಿಯರಿಗೆ ಸಂಪಾದನೆಯ ಮಾರ್ಗ. ಚಿತ್ರೀಕರಣ ಇಲ್ಲದ ದಿನ ಸಂಭಾವನೆ ಇಲ್ಲ. ಆ ಅನಿವಾರ್ಯತೆ ಎಷ್ಟೋ ಬಾರಿ ನಟಿಯರ ಬಗ್ಗೆ ‘ಟೇಕನ್ ಫಾರ್ ಗ್ರಾಂಟೆಡ್’ ಧೋರಣೆ ತಳೆಯಲು ಅನುವು ಮಾಡಿಕೊಡುತ್ತದೆ. ಒಬ್ಬರು ಬೇಸತ್ತು ಧಾರಾವಾಹಿ ಬಿಟ್ಟರೆ ಧಾರಾವಾಹಿ ತಂಡಕ್ಕೇನೂ ಹೆಚ್ಚು ನಷ್ಟವಿಲ್ಲ. ಅವರ ಪಾತ್ರ ನಿಭಾಯಿಸಲು ಹೊರಗೆ ಹತ್ತು ಮಂದಿ ಕ್ಯೂ ನಿಂತಿರುತ್ತಾರೆ. ಆದರೆ ಕೆಲಸ ಕಳೆದುಕೊಂಡ ನಟಿಗೆ ಮತ್ತೊಂದು ಕೆಲಸ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ.

ಮೂಲಭೂತ ಸೌಕರ್ಯಗಳ ಕೊರತೆ :
ಒಂದು ದೇವಸ್ಥಾನದಲ್ಲಿ ಚಿತ್ರೀಕರಣ. ನಾವುಗಳೆಲ್ಲಾ ದೃಶ್ಯಕ್ಕೆ ತಕ್ಕಂತೆ ರೇಷಿಮೆ ಸೀರೆಗಳುಟ್ಟು, ಪಾತ್ರಾನುಸಾರ ಒಡವೆಗಳನ್ನು ಹಾಕಿಕೊಂಡು ಮೇಕಪ್ ಮಾಡಿಕೊಂಡಿದ್ದೆವು. ಆ ದೇವಸ್ಥಾನದಲ್ಲಿ ಶೌಚಾಲಯವಿರಲಿಲ್ಲ. ನಮ್ಮ ಪ್ರೊಡಕ್ಷನ್ ಮ್ಯಾನೇಜರರಿಗೆ ನಾವು ಹೇಳಿದ ನಂತರ ಅವರು ಅದ್ಯಾರದೋ ಮನೆಯವರ ಬಳಿ ಮಾತಾಡಿ ನಾವು ಅವರ ಮನೆಯ ಶೌಚಾಲಯಗಳು ಉಪಯೋಗಿಸಬಹುದು ಎಂದರು. ನಾವು ಉಪಯೋಗಿಸಿದೆವು. ಮತ್ತೆ ಮಧ್ಯಾಹ್ನ ಊಟದ ನಂತರ ಮತ್ತೊಮ್ಮೆ ಅವರ ಮನೆಗೆ ಹೋದರೆ ಅವರು ನಮ್ಮನ್ನು ಗೇಟಿನಿಂದ ಒಳಗೂ ಬಿಡದೇ ಜೋರು ಧ್ವನಿಯಲ್ಲಿ ‘ಹೋಗ್ಲಿ ಪಾಪ ಅಂತ ಒಂದ್ಸಲ ಬಿಟ್ರೆ ಏನು ಮತ್ತೆ ಮತ್ತೆ ರ‍್ತಿದ್ದಾರೆ ಇವರು? ಇದೇನು ಪಬ್ಲಿಕ್ ಟಾಯ್ಲೆಟ್ಟಾ’ ಎಂದೆಲ್ಲಾ ಕಿರುಚಾಡತೊಡಗಿದರು. ನಮಗೆಲ್ಲಾ ತಡೆಯಲಾರದಷ್ಟು ಅವಮಾನ. ಅಲ್ಲಿಂದ ಬಂದುಬಿಟ್ಟೆವು. ಮತ್ತೆ ಪ್ರೊಡಕ್ಷನ್ ಮ್ಯಾನೇಜರ್ ಬಳಿ ಅದನ್ನೂ ಹೇಳಿದೆವು. ಅವರು ಮತ್ತೊಂದು ಮನೆಗೆ ಹೊರಟರು…
ಎಷ್ಟೋ ಜನ ನಟಿಯರು ಬೆಳಿಗ್ಗೆಯಿಂದ ಸಂಜೆ ಶೂಟಿಂಗ್ ಮುಗಿಯುವವರೆಗೂ ಅರ್ಧ ಲೋಟ ನೀರಿನಲ್ಲಿ ಜೀವ ಹಿಡಿದಿಟ್ಟುಕೊಂಡಿರುತ್ತಾರೆ. ಈ ನಿಸರ್ಗದ ಕರೆ ತಪ್ಪಿಸುವ ಕಾರಣಕ್ಕಾಗಿಯೇ. ಎಷ್ಟೋ ಬಾರಿ ಬಟ್ಟೆ ಬದಲಿಸಲೂ ಸರಿಯಾದ ಕೋಣೆ ಇರುವುದಿಲ್ಲ. ಆದರೆ ಪ್ರೊಡಕ್ಷನ್ ಮ್ಯಾನೇಜರ್‌ಗಳು ಅದೆಷ್ಟೋ ಜನ ನನ್ನ ಬಳಿ “ನಾನು ( ಪ್ರಖ್ಯಾತ ಚಲನಚಿತ್ರ ನಟಿಯರ ಹೆಸಗುಗಳನ್ನು ಹೇಳಿ) ಇಂಥಿAಥವರಿಗೆಲ್ಲಾ ಟಿಟಿಲಿ(ಟೆಂಪೋ) ಡ್ರೆಸ್ ಚೇಂಜ್ ಮಾಡ್ಸಿದ್ದೀನಿ ಗೊತ್ತಾ?” ಎಂದು ಜಂಬ ಕೊಚ್ಚಿಕೊಂಡಿದ್ದಾರೆ. ಅದು ಹೆಣ್ಣಿಗೆ ಮಾಡುವ ಅವಮಾನ ಎಂಬ ಪಾಪಪ್ರಜ್ಞೆ ಅವರನ್ನು ಕಾಡುವುದೇ ಇಲ್ಲ.. ಅದೊಂದು ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ ಶೂಟಿಂಗ್ ಇರುವಾಗ ಪೊದೆಗಳ ಹಿಂದೆ ಬಟ್ಟೆ ಬದಲಾಯಿಸುವುದೂ ಉಂಟು.
ಪ್ರತಿಭೆಗಿಂತ ರೂಪ ಮುಖ್ಯ:
ಹೊಸದೊಂದು ಧಾರಾವಾಹಿಯಲ್ಲಿ ಒಬ್ಬಳು ಹೊಸ ಹೀರೋಯಿನ್. ಮುದ್ದಾಗಿದ್ದಳಾದರೂ ನಟನೆಯ ಲವಲೇಶವೂ ಗೊತ್ತಿಲ್ಲ. ಸಾಲದ್ದಕ್ಕೆ ‘ಅ’ಕಾರ ‘ಹ’ಕಾರಗಳ ಉಚ್ಚಾರದ ಸಮಸ್ಯೆ ಬೇರೆ. ಅದೇ ಧಾರಾವಾಹಿಯಲ್ಲಿದ್ದ ಹಿರಿಯ ನಟಿಯೊಬ್ಬರು ಅನುಭವಿ ಮತ್ತು ಸಹಜ ನಟಿ. ಎಲ್ಲೆಲ್ಲಿ ಹೊಸಬಳ ಮುಖಭಾವ ಪೇಲವ ಎನಿಸುತ್ತದೆಯೋ ಅಲ್ಲೆಲ್ಲಾ ಪ್ರತಿಕ್ರಿಯೆಯಾಗಿ ಈ ಹಿರಿಯ ನಟಿಯ ಮುಖವನ್ನು ತೋರಿಸುತ್ತಿದ್ದರು. ಆದರೆ ಹಿರಿಯ ನಟಿಗೆ ದಿನಕ್ಕೆ ಒಂದಂಶ ಗೌರವಧನವಾದರೆ, ಆ ಹೊಸ ನಟಿಗೆ ಐದಂಶ! ಈಕೆಗಿಂತ ಆಕೆಗೆ ಐದು ಪಟ್ಟು ಹೆಚ್ಚು ಹಣ!
ಪ್ರತಿಭೆಗೆ, ಅನುಭವಕ್ಕೆ ಇಲ್ಲಿ ಹೆಚ್ಚಿನ ಬೆಲೆಯಿಲ್ಲ. ಕೇವಲ ವಯಸ್ಸಿಗೆ ಮತ್ತು ರೂಪಕ್ಕೆ ಮಾತ್ರ ಬೆಲೆ. ಇದು ಇಲ್ಲಿ ದುಡಿಯುವ ಬಹಳಷ್ಟು ಮಧ್ಯ ವಯಸ್ಸಿನ ಹೆಣ್ಣು ಮಕ್ಕಳ ಅಳಲು. ಸಾಲದ್ದಕ್ಕೆ ಇಲ್ಲಿ ಪ್ರತೀ ಹೊಸ ಪಾತ್ರಕ್ಕೂ ಅನೇಕ ಸೆಟ್ ಹೊಸ ಬಟ್ಟೆಗಳು, ಅದಕ್ಕೆ ಒಪ್ಪುವಂಥ ಒಡವೆಗಳು ಎಲ್ಲವನ್ನೂ ನಟಿಯರೇ ಖರೀದಿಸಬೇಕು. ಮುಖ, ತ್ವಚೆಯೇ ಜೀವಾಳವಾಗಿರುವ ಈ ಉದ್ಯಮದಲ್ಲಿ ಕಡಿಮೆ ಬೆಲೆಯ, ಕಡಿಮೆ ದರ್ಜೆಯ ಮೇಕಪ್ ಸಾಮಗ್ರಿಗಳನ್ನು ಬಳಸುವಂತೆಯೇ ಇಲ್ಲ. ಮೇಕಪ್ ಮ್ಯಾನ್ ಒಬ್ಬರು ಸೆಟ್‌ಗಳಲ್ಲಿ ಇರುತ್ತಾರಾದರೂ ಒಂದೇ ಮೇಕಪ್ ಸಾಮಗ್ರಿಗಳಿಂದ ಎಲ್ಲರೂ ಮೇಕಪ್ ಮಾಡಿಸಿಕೊಳ್ಳಬೇಕು. ಅದೇ ಪೌಡರ್ ಡಬ್ಬಿಯಲ್ಲಿ ಅದೇ ಬ್ರಷ್ ಅದ್ದಿ ಹಚ್ಚುತ್ತಾರೆ ಮುಂದಿನವರಿಗೂ ಅದೇ ಪೌಡರ್, ಅದೇ ಬ್ರಷ್. ಮುಖ ಹಾಳಾದರೆ ಹೊಟ್ಟೆ ಪಾಡು ಹಾಳಾದಂತೆ. ಆದ್ದರಿಂದ ಹೆಚ್ಚಿನ ನಟಿಯರು ತಮ್ಮ ಮೇಕಪ್ ಸಾಮಗ್ರಿಗಳನ್ನು ತಾವೇ ದುಬಾರಿ ಬೆಲೆ ಕೊಟ್ಟಾದರೂ ಖರೀದಿಸಿ ಇಟ್ಟುಕೊಳ್ಳುತ್ತಾರೆ. ಒಟ್ಟಿನಲ್ಲಿ ಒಬ್ಬ ನಟಿಯ ದುಡಿಮೆಯ ಅರ್ಧಕ್ಕಿಂತ ಹೆಚ್ಚು ಭಾಗ ಉಡುಪುಗಳು, ಒಡವೆಗಳು ಹಾಗೂ ಮೇಕಪ್ ಸಾಮಗ್ರಿ ಕೊಳ್ಳಲು ಖರ್ಚಾಗುತ್ತದೆ.
ಪಾತ್ರಗಳೇ ವ್ಯಕ್ತಿತ್ವದ ವಿಸ್ತರಣೆಯಾಗಿಬಿಡುವುದು :
ನನ್ನ ಗೆಳತಿಯೊಬ್ಬಳ ಮದುವೆ. ರಿಸೆಪ್ಷನ್ ನಡೆಯುತ್ತಿತ್ತು. ಖಳನಾಯಕಿಯ ಪಾತ್ರ ಮಾಡುವ ಆಕೆಯ ಬಳಿ ಹೂಗುಚ್ಛ ಹಿಡಿದು ಬಂದ ಹಿರಿಯರೊಬ್ಬರು ಮದುಮಕ್ಕಳಿಗೆ ಹಾರೈಸಿ ಪಕ್ಕದಲ್ಲೇ ನಿಂತಿದ್ದ ಹುಡುಗನ ತಂದೆಗೆ ‘ನೋಡಿಕೊಳ್ಳೀಪ್ಪಾ, ಆಮೇಲೆ ನಿಮ್ಮನ್ನೂ ಮೆಟ್ಟಿಲ ಮೇಲಿಂದ ತಳ್ಳಿಬಿಟ್ಟಾಳು…’ ಎಂದು ನಗೆಯಾಡಿದರು. (ತನ್ನ ಮಾವನನ್ನು ಮೆಟ್ಟಿಲ ಮೇಲಿಂದ ತಳ್ಳುವ ಅವಳ ದೃಶ್ಯವೊಂದನ್ನು ಅವರು ನೋಡಿದ್ದರು) ಆ ವಿಷಯ ಪ್ರಸ್ತಾಪಿಸುತ್ತಾ ಆಕೆ “ ನೋಡಿ ರಸ್ತೆಯಲ್ಲಿ ಸಿಗುವವರೆಲ್ಲಾ ನನ್ನ ಅತ್ತೆ, ಮಾವ, ನಾದಿನಿಗೆ ನನ್ನ ಬಗ್ಗೆ ಜೋಪಾನವಾಗಿರಲು ಹೇಳುತ್ತಾರೆ. ಇನ್ನು, ನನ್ನ ಬಗ್ಗೆ ಹೆಚ್ಚು ಗೊತ್ತಿಲ್ಲದ ನಮ್ಮ ಅತ್ತೆ ಮಾವನವರು ಜನ ಆಡುವುದನ್ನೇ ಸತ್ಯ ಎಂದುಕೊAಡರೆ ನನ್ನ ಗತಿಯೇನು?” ಎಂದು ನೊಂದಿದ್ದಳು. ಅದೃಷ್ಟವಶಾತ್ ಅವಳ ಅತ್ತೆ ಮಾವಂದಿರು, ನಾದಿನಿ ಎಲ್ಲರೂ ಪ್ರಬುದ್ಧರು, ವಿಶಾಲ ಹೃದಯಿಗಳು. ಇಂದು ಅವಳು ಆ ಮನೆಯ ಮುದ್ದಿನ ಸೊಸೆ. ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ.

ನಟಿಯರು ನಿರ್ವಹಿಸುವ ಪಾತ್ರಗಳ ಮೇಲೆ ಅವರನ್ನು ಅಳೆಯುವ ಸಮಸ್ಯೆ ಇಂದು ನೆನ್ನೆಯದಲ್ಲ. ಸಾಲದ್ದಕ್ಕೆ ಧಾರಾವಾಹಿ ಜಗತ್ತಿನಲ್ಲಿ ಒಮ್ಮೆ ಒಳ್ಳೆ ಪಾತ್ರಗಳಿಗೆ ಅಥವಾ ಕೆಟ್ಟ ಪಾತ್ರಗಳಿಗೆ ಎಂದು ನಿಕ್ಕಿಯಾಗಿಬಿಟ್ಟರೆ ಮತ್ತೆ ಅದನ್ನು ಬದಲಿಸುವುದು ಹರಸಾಹಸವೇ ಸರಿ. ಆದ್ದರಿಂದ ಕೆಟ್ಟ ಅಥವಾ ಖಳ ಪಾತ್ರಗಳನ್ನು ಮಾಡುವವರು ಹೊರ ಜಗತ್ತಿನಲ್ಲೂ ಬಹಳಷ್ಟು ಬಾರಿ ಅಂಥ ಪ್ರತಿಕ್ರಿಯೆಗಳನ್ನೇ ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ಅದು ವೈಯಕ್ತಿಕ ಮಟ್ಟದಲ್ಲಿ ದುಷ್ಪರಿಣಾಮ ಬೀರುವಷ್ಟು ಪ್ರಭಾವಶಾಲಿಯಾಗಿರುತ್ತದೆ. ಇವೆಲ್ಲದರ ಜೊತೆ ಲೈಂಗಿಕ ಕಿರುಕುಳಗಳು, ಫೇವರಿಟಿಸಂ ಮೊದಲಾದ ಸಮಸ್ಯೆಗಳನ್ನೂ ಇಲ್ಲಿ ನಟಿಯರು ಎದುರಿಸಬೇಕು. ಋತುಚಕ್ರದ ದಿನಗಳಲ್ಲಿ ಹೊಟ್ಟೆನೋವು, ಆರೋಗ್ಯದ ಏರುಪೇರುಗಳನ್ನು ಅವಡುಗಚ್ಚಿ ಸಹಿಸಿಕೊಂಡು ನಟಿಸುವ ಕೆಲಸ ಮಾಡಬೇಕಾಗುತ್ತದೆ. ಗರ್ಭಿಣಿ ಸ್ತ್ರೀಯರಿಗೆ ಬೇರೆ ವೃತ್ತಿಯಲ್ಲಿ ಇರುವಂತೆ ವಿಶೇಷ ಸವಲತ್ತುಗಳು ಈ ಅಸಂಘಟಿತ ಕ್ಷೇತ್ರದಲ್ಲಿ ಇಲ್ಲ. ಕೆಲಸದ ವೇಳೆಯಲ್ಲಿನ ಅಸ್ತವ್ಯಸ್ತತೆ, ಪ್ರಯಾಣ ಇತ್ಯಾದಿ ತೊಂದರೆಗಳಿರುವುದರಿAದ ಸಂತಾನ ಬೇಕೆಂದಾಗ ನಟನೆಯನ್ನು ನಿಲ್ಲಿಸುವ ಕಠಿಣ ನಿರ್ಧಾರ ಅನಿವರ‍್ಯ.
ಕಲಾವಿದೆಯರು ಸುಖದ ಸುಪ್ಪತ್ತಿಗೆಯಲ್ಲಿರುತ್ತಾರೆ ಎಂಬ ತಪ್ಪುಕಲ್ಪನೆ ಜನಸಾಮಾನ್ಯರಲ್ಲಿರುತ್ತದೆ. ‘ನಿಮಗೇನು ಮಜ!’ ಎಂಬರ್ಥದ ಮಾತುಗಳು ನಟಿಯರ ಬಗ್ಗೆ ಸರ್ವೇಸಾಮಾನ್ಯ. ಆದರೆ ಇಲ್ಲಿ ಕೂಡಾ ಬೇರೆಲ್ಲಾ ವೃತ್ತಿಗಳಂತೆ ಹೋರಾಟಗಳಿವೆ, ಪರದಾಟಗಳಿವೆ ಮನೆಯ ಒಳಗೂ ಹೊರಗೂ ದುಡಿಯುವ ಬೇರೆಲ್ಲಾ ಹೆಣ್ಣು ಮಕ್ಕಳಿಗಿರುವ ಸಮಸ್ಯೆಗಳು ಧಾರಾವಾಹಿ ನಟಿಯರಿಗೂ ಇವೆ. ತಮ್ಮನ್ನು ತಾವು ಸಮಾಜದಲ್ಲಿ ಒಂದು ಗೌರವಾನ್ವಿತ ಸ್ಥಾನದಲ್ಲಿ ಇರಿಸಿಕೊಳ್ಳುವ ಹಾದಿ ನಟಿಯರಿಗೆ ಬಹಳ ದೂರದ್ದು ಹಾಗೂ ಕಷ್ಟದ್ದು. ಮೇಲೆ ಹೇಳಿದ ಸಮಸ್ಯೆಗಳು ಬಹಳ ಸ್ಥೂಲವಾದವು. ಅವುಗಳ ಪರಿಣಾಮಗಳು ಇನ್ನೂ ಬೇರೆ ಬೇರೆ ದಿಕ್ಕುಗಳಲ್ಲಿ ಹರಡಿಕೊಂಡಿರುತ್ತದೆ. ಏನೇ ಇದ್ದರೂ ಕ್ಯಾಮರಾ ಮುಂದೆ ನಿಂತು, ನಿರ್ದೇಶಕ `ಆಕ್ಷನ್’ ಹೇಳಿದಾಗ ಎಲ್ಲವನ್ನೂ ಮರೆಯುವ ನಟಿ ಪಾತ್ರದಲ್ಲಿ ಲೀನವಾಗುತ್ತಾಳೆ.

* ದೀಪಾ ರವಿಶಂಕರ್,
ಕಿರುತೆರೆ ಹಾಗೂ ಚಲನಚಿತ್ರ ಕಲಾವಿದೆ

Share this article :
Facebook
Twitter
LinkedIn

Leave a Reply

Your email address will not be published. Required fields are marked *

WRITTEN BY
FOLLOW ON
Tamara Hospital & IVF Centre
FOLLOW & SUBSCRIBE
Garden City University