ಚಿಕ್ಕ ವಯಸ್ಸಿಗೇ ಮಂಗಳೂರಿನಿOದ ಮುಂಬೈಗೆ ಪಯಣ. ೧೩ ನೇ ವಯಸ್ಸಿಗೆ ಮದುವೆ. ೩೧ ನೇ ವಯಸ್ಸಿಗೆ ಪತಿ ವಿಯೋಗ. ಆದರೆ ಕುಗ್ಗದೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು ಮಹಿಳೆಯರಿಗೆ ಶಿಕ್ಷಣವೇ ಸ್ವಾತಂತ್ರ್ಯ ಎಂದು ಸಾರಿದರು. ದೇಶ ಸ್ವಾತಂತ್ರ್ಯ ಪಡೆದುಕೊಂಡಾಗ ರಾಷ್ಟçಮಟ್ಟದಲ್ಲಿ ಇವರಿಗೆ ಹೆಸರಿತ್ತು. ಆದರೆ ಪದವಿ, ಪಿಂಚಣಿ, ತಾಮ್ರಪತ್ರ ಎಲ್ಲವನ್ನೂ ನಯವಾಗಿ ನಿರಾಕರಿಸಿ ಅತ್ಯಂತ ಸಾಮಾನ್ಯ ಕಾರ್ಯಕರ್ತೆಯಾಗಿ ಎಲೆಮರೆ ಕಾಯಿಯಂತೆ ದುಡಿದರು. ಇವರೇ ಉಮಾಬಾಯಿ ಕುಂದಾಪುರ (Umabai Kundapur).
****
ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡದ ಹೆಣ್ಮಕ್ಕಳ ಕೊಡುಗೆ ಅನುಪಮ. ಇಡೀ ದೇಶದಲ್ಲಿ ಮೊಟ್ಟ ಮೊದಲ ಸಲ ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಊದಿದ್ದು ಕಿತ್ತೂರು ರಾಣಿ ಚೆನ್ನಮ್ಮ. ಆದರೆ ೧೯ ನೆಯ ಶತಮಾನದ ಅಂತ್ಯದಲ್ಲಿ ಮಧ್ಯಮವರ್ಗದ ಮಹಿಳೆ ಸಂಪ್ರದಾಯದ ಸಂಕೋಲೆಯಲ್ಲಿ ಬಂಧಿತಳಾಗಿದ್ದರು. ಅಂಥ ದಿನಗಳಲ್ಲಿ ಕರಾವಳಿಯ ಮಹಿಳೆಯೊಬ್ಬರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಧೀಮಂತಿಕೆ ಮೆರೆದರು. ಅವರನ್ನು ಸರೋಜಿನಿ ನಾಯ್ಡು, ಕ್ಯಾಲಕ್ಷ್ಮಿ ಸೆಹಗಲ್ ಸಾಲಿನಲ್ಲಿ ದೇಶದ ಟಾಪ್ ೫ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಗುರುತಿಸಿ ಇಂಗ್ಲಿಷ್‌ನಲ್ಲಿ ಲೇಖನಗಳು ಬಂದಿವೆ. ಆದರೆ ಹಿತ್ತಲಗಿಡ ಮದ್ದಲ್ಲ ಎಂಬAತೆ ಕನ್ನಡಗಿರಿಗೇ ಇವರ ಹೆಸರು ಅಪರಿಚಿತ!
ಹೌದು. ಅವರ ಹೆಸರು ಉಮಾಬಾಯಿ ಕುಂದಾಪುರ (Umabai Kundapur). ೧೮೯೨ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಕೃಷ್ಣರಾವ್, ತಾಯಿ ತುಂಗಾಬಾಯಿ. ಅಂದಿನ ಕಾಲಕ್ಕೇ ಅಣ್ಣಂದಿರು ಮುಂಬಯಿಯಲ್ಲಿ ನೌಕರಿ ಮಾಡುತ್ತಿದ್ದರು. ಅವರ ಜೊತೆ ಚಿಕ್ಕ ವಯಸ್ಸಿನಲ್ಲಿ ಮುಂಬಯಿ ಮಹಾನಗರ ಸೇರಿದರು ಉಮಾಬಾಯಿ. ೧೯೦೫ ರಲ್ಲಿ ೧೩ ನೇ ವಯಸ್ಸಿನಲ್ಲಿ ಸಂಜೀವ ರಾವ್ ಅವರೊಂದಿಗೆ ವಿವಾಹವಾಯಿತು.
ಉಮಾಬಾಯಿ ಮಾವ ಆನಂದರಾವ್ ಕುಂದಾಪುರ ಸುಧಾರಣಾವಾದಿ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟವರು. ಒತ್ತಾಸೆಯ ಮೇರೆಗೆ ಸೊಸೆ ಶಿಕ್ಷಣ ಮುಂದುವರಿಸಲು ಪುಣೆಯ ಅಣ್ಣಾ ಸಾಹೇಬ್ ಖಾರ್ವೆ ಶಾಲೆಗೆ ಸೇರಿಸಿದರು. ಇಲ್ಲಿಂದ ಉಮಾಬಾಯಿ ಜೀವನ ಹೊಸ ಮಗ್ಗುಲಿಗೆ ಹೊರಳಿಕೊಂಡಿತು. ಮಹಿಳಾ ಸಾಕ್ಷರತೆಯ ದ್ಯೋತಕವಾದರು ಉಮಾ. ೧೦ನೇ ತರಗತಿ ಮುಗಿಸಿದ್ದಕ್ಕೆ ಮುಂಬಯಿಯ ಸಾರಸ್ವತ ಮಹಿಳಾ ಸಮಾಜ ಉಮಾ ಅವರನ್ನು ಗೌರವಿಸಿತು! ಅಂದಿನ ಕಾಲಕ್ಕೆ ಅದು ದೊಡ್ಡ ವಿಷಯ.
ಮುಂದೆ ಮಹಿಳಾ ಶಿಕ್ಷಣ ವಿಷಯದಲ್ಲಿ ಮಾವನವರೊಂದಿಗೆ ಕೈಜೋಡಿಸಿ ಹಗಲಿರುಳು ದುಡಿಯತೊಡಗಿದರು ಉಮಾಬಾಯಿ.
೧೯೨೦ ಆಗಸ್ಟ್ ೧ ರಂದು ನೇತಾರರಾದ ಬಾಲಗಂಗಾಧರ ತಿಲಕರು ಮೃತರಾದರು. ಅವರ ಪಾರ್ಥಿವ ಶರೀರದ ಭವ್ಯ ಮೆರವಣಿಗೆ ನೋಡಿದ ಉಮಾಬಾಯಿಗೆ ಏನೋ ಪ್ರೇರಣೆಯಾದಂತಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಅಣಿಯಾದರು. ಅದೇ ವೇಳೆ ಮಹಾತ್ಮಾ ಗಾಂಧೀಜಿ ಅಸಹಕಾರ ಚಳುವಳಿಗೆ ಕರೆ ಕೊಟ್ಟಿದ್ದರು. ಉಮಾಬಾಯಿ ಸೋದರರೊಡಗೂಡಿ ಚಳುವಳಿಗೆ ಧುಮುಕಿಯೇಬಿಟ್ಟರು. ಖಾದಿ ಪ್ರಚಾರ ಮಾಡಿದರು. ನಾಟಕಗಳನ್ನು ಬರೆದು ಆಡಿಸಿದರು.
ಉಮಾಬಾಯಿ ೩೧ ವರ್ಷದ ಹೊಸ್ತಿಲಲ್ಲಿದ್ದಾಗ ಪತಿ ಸಂಜೀವರಾವ್ ಕ್ಷಯ ರೋಗದಿಂದ ತೀರಿಕೊಂಡರು. ಈ ಆಘಾತದಿಂದ ಚೇತರಿಸಿಕೊಳ್ಳಲು ಮಾವ ಕುಟುಂಬ ಸಮೇತ ಹುಬ್ಬಳ್ಳಿಗೆ ಸ್ಥಳಾಂತರಗೊOಡರು. ಅಲ್ಲದೇ ಕರ್ನಾಟಕ ಪ್ರೆಸ್ ಆರಂಭಿಸಿದರು.
೧೯೨೩ ರಲ್ಲಿ ಶಿಕ್ಷಣ ಮುಗಿಸಿ ಅಮೇರಿಕದಿಂದ ಹಿಂದಿರುಗಿದ ಡಾ. ನಾ.ಸು. ಹರ್ಡಿಕರ್ `ಹಿಂದೂಸ್ತಾನ ಸೇವಾದಳ’ ಆರಂಭಿಸಿದರು. ಉಮಾಬಾಯಿ ಸೇವಾದಳ ಮಹಿಳಾ ವಿಭಾಗದ ಸಾರಥ್ಯ ವಹಿಸಿಕೊಂಡರು. ಇವರನ್ನು ಹೋರಾಟದ ರಂಗಕ್ಕೆ ಕರೆ ತಂದವರೇ ಡಾ. ನಾ.ಸು.ಹರ್ಡೀಕರ್.
೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಕರ‍್ಯಕರ್ತೆಯಾಗಿ ಅಧಿಕೃತವಾಗಿ ಹೋರಾಟ ಜೀವನಕ್ಕೆ ಕಾಲಿಟ್ಟರು. ಇದು ಮಹಾತ್ಮ ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಅಧಿವೇಶನ. ರಾಜ್ಯಾದ್ಯಂತ ಓಡಾಡಿ, ಪತಿಯನ್ನು ಕಳೆದುಕೊಂಡು ಮನೆಯಲ್ಲಿ ಮೂಲೆಗುಂಪಾಗಿ ಕುಳಿತಿದ್ದ ೧೫೦ಕ್ಕೂ ಅಧಿಕ ವಿಧವೆಯರನ್ನು ಬೆಳಕಿಗೆ ಕರೆತಂದು ಅಧಿವೇಶನದ ಸಂಘಟನೆಯ ಕೆಲಸಕ್ಕೆ ಹಚ್ಚಿದರು. ಇದು ಆ ಮಹಿಳೆಯರ ಕುಗ್ಗಿದ ಆತ್ಮವಿಶ್ವಾಸ ಹೆಚ್ಚಿಸಿತು. ಈ ಸಂದರ್ಭದಲ್ಲಿ ಉಮಾಬಾಯಿ ಅವರಿಗೆ ಹಲವಾರು ರಾಷ್ಟಿçÃಯ ನಾಯಕರು ಸಂಪರ್ಕಕ್ಕೆ ಬಂದರು. ಪರಿಣಾಮ ೧೯೨೭-೨೮ ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯ ಉಪಾಧ್ಯಕ್ಷೆಯಾದರು. ಈ ಜವಾಬುದಾರಿ ಹೊತ್ತ ರಾಜ್ಯದ ಮೊದಲ ಮಹಿಳೆ ಎನ್ನಿಸಿಕೊಂಡರು. ಆನಂದರಾಯರ ಮುದ್ರಣ ಘಟಕ ಚಳುವರಿಗಾರರ ಕಾರ್ಯಕೇಂದ್ರವಾಯಿತು.
ಈ ನಡುವೆ `ಭಗಿನಿ ಮಂಡಲ’ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಮಹಿಳೆಯರನು ಒಗ್ಗೂಡಿಸತೊಡಗಿದರು. ಅಂದಿನ ಕಾಲಕ್ಕೇ ಮಾವನ ನೆರವಿನಿಂದ ಹುಬ್ಬಳ್ಳಿಯಲ್ಲಿ ತಿಲಕ ಕನ್ಯಾಶಾಲೆ ಸ್ಥಾಪಿಸಿ ಅರಿವೇ ಸ್ವಾತಂತ್ರ್ಯದ ಮೂಲ ಎಂದು ಸಾರಿದರು. ಇವರ ಹೋರಾಟದ ಬಿಸಿ ತಟ್ಟಿ ೧೯೩೨ ರಲ್ಲಿ ಉಮಾಬಾಯಿ (Umabai Kundapur) ಅವರನ್ನು ಬಂಧಿಸಿ ಯರವಾಡ ಜೈಲಿಗೆ ಅಟ್ಟಲಾಯಿತು. ಅದೇ ಜೈಲಿನಲ್ಲಿದ್ದ ಸರೋಜಿನಿ ನಾಯ್ಡು ಉಮಾಬಾಯಿವರಿಗೆ ಧೈರ್ಯ ಹೇಳಿ ಕೆಲವು ಸಲಹೆಗಳನ್ನಿತ್ತರು. ದುರಂತವೆAದರೆ ಇವರು ಜೈಲಿನಲ್ಲಿದ್ದಾಗಲೇ ಸರ್ವ ರೀತಿಯಿಂದ ಬೆಂಬಲವಾಗಿದ್ದ ಮಾವ ತೀರಿಹೋದ ಸುದ್ದಿ ಬಂತು. ಉಮಾಬಾಯಿ ಜೈಲಿಂದ ಹೊರಬರುವ ವೇಳೆಗೆ ಮಾವನವರ ಕರ್ನಾಟಕ ಪ್ರೆಸ್ ಮುಟ್ಟುಗೋಲು ಹಾಕಿದ್ದ ಬ್ರಿಟಿಷರು ತಿಲಕ ಕನ್ಯಾಶಾಲೆಗೆ ಬೀಗ ಜಡಿದಿದ್ದರು!
ಆಘಾತದ ಮೇಲೆ ಆಘಾತವಾದರೂ ಛಲಬಿಡದ ಉಮಾಬಾಯಿ ೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿ ಸಂದರ್ಭ ನೂರಾರು ಹೋರಾಟಗಾರರಿಗೆ ಮನೆಯಲ್ಲಿ ಅನ್ನ, ವಸತಿ, ಆಶ್ರಯ ನೀಡಿದರು. ಇದು ಅತ್ಯಂತ ಅಪಾಯಕಾರಿ ಕೆಲಸವಾಗಿತ್ತು.
೧೯೩೪ರಲ್ಲಿ ಬಿಹಾರ ಭೂಕಂಪ ಸಂತ್ರಸ್ಥರ ನೆರವಿಗೆ ಹರ್ಡೀಕರ್ ಅವರೊಂದಿಗೆ ಧಾವಿಸಿದ ಉಮಾಬಾಯಿ ಅವರಿಗೆ ರಾಷ್ಟಿçÃಯ ನಾಯಕರ ಸಂಪರ್ಕವೂ ದೊರೆಯಿತು. ೧೯೩೮ ರಲ್ಲಿ ಬಾಂಬೆ ಪ್ರಾಂತೀಯ ವಯಸ್ಕರ ಶಿಕ್ಷಣ ಮಂಡಳಿಯ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡರು. ಕರ್ನಾಟಕ, ಮಹಾರಾಷ್ಟç, ಗುಜರಾತ್ ಆದ್ಯಂತ ಸಂಚರಿಸಿ ಮಹಿಳೆಯರ ಸ್ಥಿತಿಗತಿ ಅಧ್ಯಯನ ಮಾಡಿದರು. ೧೯೪೬ ರಲ್ಲಿ ಮಹಾತ್ಮಾ ಗಾಂಧಿಯವರ ಕಸ್ತೂರಬಾ ಟ್ರಸ್ಟ್ ಕರ್ನಾಟಕ ಶಾಖೆಯ ನಿರ್ವಾಹಕಿಯಾದರು. ಇದು ಮಹಿಳಾ ಏಳಿಗೆಗೆ ಮೀಸಲಾದ ಸಂಸ್ಥೆ. ಉಮಾಬಾಯಿ ಮನೆಮನೆ ತೆರಳಿ ಭಿಕ್ಷೆ ಬೇಡಿ ಸಂಸ್ಥೆ ಮುನ್ನಡೆಸಿದರು. ಕೆಳಸ್ತರದ ಮಹಿಳೆಯರಿಗೆ ಕರಕುಶಲ ಮತ್ತಿತರ ತರಬೇತಿ ನೀಡಿ ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಮಾಡಿದರು.
೧೯೪೭ ರಲ್ಲಿ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ಉಮಾಬಾಯಿ ಹೆಸರು ರಾಷ್ಟçಮಟ್ಟದ ನಾಯಕರ ಮಧ್ಯೆ ಪ್ರಸಿದ್ಧವಾಗಿತ್ತು. ರಾಜಕೀಯ ಪ್ರವೇಶಿಸುವ ಅವಕಾಶ ಹುಡುಕಿಕೊಂಡು ಬಂದಿತು. ಮನಸ್ಸು ಮಾಡಿದರೆ ನೆಹರೂ ಸಂಪುಟದಲ್ಲಿ ಸಚಿವೆಯಾಗಬಹುದಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡುವ ರಾಜ್ಯ, ರಾಷ್ಟಿçÃಯ ಮಟ್ಟದ ಪಿಂಚಣಿ, ಮುಂಚೂಣಿಯ ಹೋರಾಟಗಾರರಿಗೆ ಕೊಡಲಾಗುವ ತಾಮ್ರಪತ್ರ ಪ್ರಶಸ್ತಿ ಎಲ್ಲಕ್ಕೂ ಉಮಾಬಾಯಿ ಅತ್ಯಂತ ಅರ್ಹರಿದ್ದರು. ಆದರೆ ಅವರು ಇದ್ಯಾವುದನ್ನೂ ಸ್ವೀಕರಿಸಲು ಒಪ್ಪಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯ ಸ್ವಯಂಸೇವಿಕೆಯಾಗಿ ಇರಲು ಬಯಸಿ ಅದರಂತೆ ಬದುಕಿ ೧೯೯೨ ರಲ್ಲಿ ತಮ್ಮ ನೂರನೆ ವಯಸ್ಸಿನಲ್ಲಿ ನಿಧನರಾದರು. ಶತಮಾನದ ಸ್ವಾತಂತ್ರ್ಯ ಕೊಂಡಿ ಕಳಚಿದ್ದು ಅಷ್ಟೊಂದು ಸುದ್ದಿಯಾಗಲೇ ಇಲ್ಲ.
ಯಾವುದೇ ಪ್ರತಿಫಲ ಬಯಸದೇ ದಶಕಗಳ ಕಾಲ ನಿರಂತರ ದುಡಿದ ಉಮಾಬಾಯಿಯವರಂಥ ಇನೊಬ್ಬ ಮಹಿಳೆಯನ್ನು ಕಂಡಿಲ್ಲ ಎಂದು ನಾ.ಸು. ಹರ್ಡೀಕರ್ ಒಂದೆಡೆ ಉಲ್ಲೇಖಿಸಿದ್ದಾರೆ. (Umabai Kundapur)
• ಅಚ್ಯುತ ಕಣಕಟ್ಟೆ
ALSO READ –