gahana logo

Gahana Magazine

₹199/ Year

Kannada Blog

ಇದು ಶಾಪಿಂಗೊ? ಶೇವಿಂಗೊ!

ಶಾಪಿಂಗ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ? ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಶಾಪಿಂಗ್ ಮಾಡೋಕೆ ಬಿಟ್ಟರೆ ಹಗಲು ರಾತ್ರಿಯ ಪರಿವೆಯಿಲ್ಲದೆ ಅದರಲ್ಲಿಯೇ ತಲ್ಲೀನರಾಗುತ್ತಾರೆ. ಅದಕ್ಕೆ ನಾನೂ ಹೊರತಲ್ಲ. ಅದರಲ್ಲಿಯೂ ಯಾವುದಾದರೂ ಪರವೂರಿಗೆ ಪ್ರಯಾಣ ಬೆಳೆಸಬೇಕಾಗಿ ಬಂದರಂತೂ  ಮುಗಿಯಿತು, ಹೊಸ ಬಟ್ಟೆ, ಅದಕ್ಕೆ ಹೊಂದುವ ಚಪ್ಪಲಿ, ಬೊಟ್ಟು, ಒಡವೆ ಎಲ್ಲವೂ ಹೊಸತೇ ಬೇಕು.

ಹೀಗಿರೋವಾಗ ಒಂದು ದಿನ, ರಾಜಸ್ಥಾನಕ್ಕೆ ಹೋಗುವುದೆಂದು ನಿರ್ಧರಿಸಿದೆ. ಇನ್ನೇನು ಎಲ್ಲ ಹೊಸ ವಸ್ತುಗಳ ಖರೀದಿ ಪ್ರಾರಂಭಿಸಬೇಕಲ್ಲ… ರಾಜಸ್ಥಾನದಲ್ಲಿ ಅರಮನೆಗಳಂಥ ಜಾಗವೇ ಹೆಚ್ಚಿರುವ ಕಾರಣ ಈ ಜೀನ್ಸ್ ಪ್ಯಾಂಟ್‌ಗಿಂತ, ಮ್ಯಾಕ್ಸಿ ಡ್ರೆಸ್ ಚೆನ್ನಾಗಿ ಹೊಂದುತ್ತೆಂದು ಶಾಪಿಂಗಿಗೆ ಹೊರಟೆ.

ಕಮರ್ಷಿಯಲ್ ಸ್ಟ್ರೀಟ್ಗೆ ಹೋದರೆ ಬೆಲೆಯೂ ಕಡಿಮೆ ವಿಧವಿಧವಾದ ಬಟ್ಟೆಯೂ ಸಿಗುತ್ತದೆ ಎಂದು ಅಲ್ಲಿಗೆ ಹೋಗಿದ್ದಾಯಿತು. ಅಂಗಡಿಯವನು ಒಂದೊಂದು  ಡ್ರೆಸ್ಸಿಗೆ ಸಾವಿರ ಹೇಳಿದರೆ, ನಾನು ಅವನ ತಲೆಯ ಮೇಲೆ ಕೂತು ಚೌಕಾಸಿ ಮಾಡಿ ಅದರ ಬೆಲೆಯನ್ನು ಆರುನೂರಕ್ಕೆ ಇಳಿಸಿ, ಹತ್ತು ಹಲವಾರು ಬಟ್ಟೆಗಳನ್ನು ಕೊಂಡು ತಂದೆ. ನನಗೋ, ಚೌಕಾಸಿ ಮಾಡಿ ಹಣ ಉಳಿಸಿದ ಸಂಭ್ರಮ. ಸುಮ್ಮನೆ ಇರೋಕೆ ಮನಸ್ಸು ಕೇಳಬೇಕಲ್ಲ. ತಕ್ಷಣ ಪಕ್ಕದ ಮನೆ ಪದ್ಮಾನ ಕರೆದು ಬಟ್ಟೆಗಳ ಪ್ರದರ್ಶನಕ್ಕಿಟ್ಟೆ. ಅವಳು ಎಲ್ಲ ಬಟ್ಟೆಯ ಬೆಲೆ ಕೇಳತೊಡಗಿದಳು. ನಾನು ಜಂಭದಿಂದ, “ನೋಡು ನಾನು ಹೇಗೆ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಬಟ್ಟೆ ತಂದಿದ್ದೇನೆ” ಎಂದೆ. ಅದಕ್ಕವಳು ನಕ್ಕು “ಅಯ್ಯೋ ಮಂಕುದಿಣ್ಣೆ, ನೋಡಿಲ್ಲಿ ಆನ್‌ಲೈನ್‌ನಲ್ಲಿ ಇನ್ನೂ ಕಡಿಮೆಗೆ ಇದೇ ತರಹದ ಬಟ್ಟೆಗಳಿವೆ” ಎಂದಳು. ‘ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ’ ಅನ್ನೊ ಗಾದೆಯ ಹಾಗೆ, ಬಟ್ಟೆಯ ಕ್ವಾಲಿಟಿ ಬೇರೆ ಬೇರೆ ಇರುವುದೆಂದು ವಾದಿಸಿದೆ.

Kannada Blog

ಅವಳು ಅತ್ತ ಕಡೆ ಹೋಗುತ್ತಿದ್ದಂತೆ ಮನಸ್ಸು ಕೇಳಬೇಕಲ್ಲ, ಆನ್‌ಲೈನ್‌ನಲ್ಲಿ ಹುಡುಕಾಟ ಪ್ರಾರಂಭಿಸಿದೆ. ಬೆಲೆ ಕಡಿಮೆ ಇರುವುದು ನಿಜವೆನಿಸಿ, ಹೇಗೂ ಇದಕ್ಕೆ ಮ್ಯಾಚಿಂಗ್ ಒಡವೆ ಬೇಕಲ್ಲ, ಅದನ್ನಾದರೂ ತೆಗೆದುಕೊಳ್ಳೋಣವೆಂದು ಸಮಾಧಾನ ಮಾಡಿಕೊಂಡು, ಯಾವುದಕ್ಕೆ ಹೆಚ್ಚು ರಿಯಾಯಿತಿ ಇದೆಯೊ ನೋಡಿ ಒಂದಷ್ಟು ಓಲೆ, ಸರ, ಬಳೆಗಳನ್ನೆಲ್ಲ ಖರೀದಿಸಿದೆ. ಅಬ್ಬಾ ಇಲ್ಲಿಯಾದರೂ ಹಣ ಉಳಿಸಿದೆನಲ್ಲ ಎಂದು ಬೀಗಿದೆ.

ಎಲ್ಲ ಸಿದ್ಧತೆಗಳೊಂದಿಗೆ ರಾಜಸ್ಥಾನ ತಲುಪಿ ನೋಡುವ ಸ್ಥಳಗಳನ್ನೆಲ್ಲ ನೋಡಿದ್ದಾಯಿತು. ಅಷ್ಟರಲ್ಲಿ ಹಲವರು ರಾಜಸ್ಥಾನದಲ್ಲಿ ಸ್ಟ್ರೀಟ್ ಶಾಪಿಂಗ್ ತುಂಬಾ ಚೆನ್ನಾಗಿದೆ ಎಂದಿದ್ದು ನೆನಪಾಗಿ, ಶಾಪಿಂಗ್‌ಗೆ ಹೊರಟೆ. ಅಬ್ಬಾ ಎಂಥೆಂಥ  ಸುಂದರ ಓಲೆಗಳು, ಸರಗಳು; ಎಲ್ಲವೂ ನಾನು ಆನ್‌ಲೈನ್‌ನಲ್ಲಿ ಕೊಂಡುಕೊಂಡಂತೆಯೇ ಇದ್ದವು. ಇರಲಿ ಸುಮ್ಮನೆ ಎಷ್ಟೆಂದು ವಿಚಾರಿಸೋಣ ಎಂದು ವಿಚಾರಿಸಿದರೆ ಎಲ್ಲವೂ ಆನ್‌ಲೈನ್ ಬೆಲೆಗಿಂತ ಅರ್ಧ ಬೆಲೆ! ಮತ್ತೆ ಮುಖ ಬಾಡಿತು. ಛೆ! ಇಲ್ಲಿಯೇ ಬಂದು ಕೊಂಡುಕೊಳ್ಳಬಹುದಿತ್ತು ಎಂದು ನನ್ನನ್ನು ನಾನೇ ಬೈದುಕೊಂಡು ಅಂಗಡಿಯಿಂದ  ಹೊರ ನಡೆದೆ.

ಅಷ್ಟರಲ್ಲಿ ಪಕ್ಕದ ಅಂಗಡಿಯವನು “ಬನ್ನಿ ಮೇಡಮ್ ಹ್ಯಾಂಡ್‌ಮೇಡ್ ರಜಾಯಿಗಳಿವೆ. ನಿಮ್ಮ ಬೆಂಗಳೂರಿನ ಅರ್ಧಬೆಲೆ, ಉತ್ತಮ ಕ್ವಾಲಿಟಿ” ಎಂದ. ನೋಡಿ ನನಗೂ ಹೌದೆನಿಸಿತು. ಇದನ್ನಾದರೂ ಕಡಿಮೆ ಬೆಲೆಗೆ ಕೊಳ್ಳೋಣವೆಂದು ನೂರೆಂಟು ರಜಾಯಿ ನೋಡಿ, ಗುಲಾಬಿ ಬಣ್ಣದ ಹಿನ್ನೆಲೆಯ ಮೇಲೆ ಕೆಂಬಣ್ಣದ ಹೂವಿನ ಚಿತ್ರಗಳಿರುವ ರಜಾಯಿ ಖರೀದಿಸಿದೆ. ಮುಟ್ಟಿದರೆ ಬೆಣ್ಣೆಯಂತಿತ್ತು. ಎಲ್ಲಾ ಬೇಸರವನ್ನು ಮರೆತು ಮನೆಗೆ ಬಂದು ಅದನ್ನು ಉಪಯೋಗಿಸುವ ಮುನ್ನ ತೊಳೆಯೋಣವೆಂದು ವಾಷಿಂಗ್ ಮಷೀನ್‌ಗೆ ಹಾಕಿದೆ. ಹತ್ತು ನಿಮಿಷದಲ್ಲಿ ಬಣ್ಣವೆಲ್ಲ ಒಂದಕ್ಕೊಂದು ಅಂಟಿತ್ತು. ಮತ್ತೆ ಮುಖ ಬಾಡಿತ್ತು. ಅಷ್ಟರಲ್ಲಿ ನನ್ನ ಪರ್ಸಿನ ಹಣವೆಲ್ಲ ಖಾಲಿಯಾಗಿತ್ತು. ಆಗಲೇ ತಿಳಿದದ್ದು- ಇದು ಶಾಪಿಂಗ್ ಅಲ್ಲ ಶೇವಿಂಗ್ ಅಂತ!

ಒಟ್ಟಿನಲ್ಲಿ ಈ ಶಾಪಿಂಗ್ ಮಾಡೋವಾಗ ನಾವು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು, ಅನುಭವಗಳೇ ಬುದ್ಧಿ ಕಲಿಸುತ್ತವೆ ಎಂಬುದಂತೂ ಸುಳ್ಳಲ್ಲ. (Kannada Blog)

-ದೀಪಾ ಬಿ.ಕೆ.

Kannada Magazine | Kannada Online Magazine | Gahana

Share this article :
Facebook
Twitter
LinkedIn

Leave a Reply

Your email address will not be published. Required fields are marked *

WRITTEN BY
FOLLOW ON
Tamara Hospital & IVF Centre
FOLLOW & SUBSCRIBE
Garden City University